ದ.ಕ – ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳಿಂದ ತಮ್ಮ ಮಕ್ಕಳ ಜೊತೆ ಸಾಮಾಜಿಕ ಅಂತರ…
ಮಂಗಳೂರು: ಅಗತ್ಯ ಕಡೆಗಳಿಗೆ ಸುತ್ತಾಡಬೇಕಾಗುವುದರಿಂದ ಮುಂಜಾಗ್ರತ ಕ್ರಮವಾಗಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರು ತಮ್ಮ ಮಕ್ಕಳಿಂದ ದೂರವಿದ್ದು ಸಾಮಾಜಿಕ ಅಂತರ ಕಾಪಾಡುತ್ತಿದ್ದಾರೆ.
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ರೋಗ ಲಕ್ಷಣ ಇರುವವರು ನಿಗದಿತ ದಿನಗಳವರೆಗೆ ಪ್ರತ್ಯೇಕವಾಗಿ ವಾಸವಿರಬೇಕು ಎನ್ನುವುದು ಜಿಲ್ಲಾಡಳಿತದ ಸೂಚನೆ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್
ಅವರೇ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿ, 22 ದಿನಗಳಿಂದ ತನ್ನ ಪುಟ್ಟ ಮಗುವಿನಿಂದ ದೂರವಿದ್ದು ಜಿಲ್ಲಾಡಳಿತದ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಸೋಂಕು ಕಾಣಿಸಿಕೊಂಡ ಮೊದಲ ದಿನದಿಂದ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ತಮ್ಮ ಎರಡು ವರ್ಷಗಳ ಮಗುವಿನ ಲಾಲನೆ, ಪಾಲನೆಯಿಂದ ದೂರ ಉಳಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಡಳಿತ ಕೆಲಸದ ಜತೆಗೆ ಮನೆಯಲ್ಲಿ ತಾಯಿಯಾಗಿ ಮಗುವಿನ ಆರೈಕೆಯಲ್ಲಿ ತೊಡಗುತ್ತಿದ್ದ ಅವರು ಈಗ ಮಗುವಿನ ಆರೋಗ್ಯದ ದೃಷ್ಟಿಯಿಂದ ಅಂತರ ಕಾಪಾಡುತ್ತಿದ್ದಾರೆ.
ಮಂಗಳೂರಿನಲ್ಲಿ ಇರುವ ಜಿಲ್ಲಾಧಿಕಾರಿ ಬಂಗಲೆಯಲ್ಲಿ ಸಿಂಧೂ ಬಿ. ರೂಪೇಶ್ ಜತೆಗೆ ಅವರ ತಂದೆ, ತಾಯಿ ಇದ್ದಾರೆ. ಸಿಂಧೂ ಅವರು ಕರ್ತವ್ಯದಲ್ಲಿ ಇರುವಾಗ ದಿನಪೂರ್ತಿ ತಂದೆ, ತಾಯಿಯೇ ಮಗುವನ್ನು ನೋಡಿಕೊಳ್ಳುತ್ತಾರೆ. ಜಿಲ್ಲಾಧಿಕಾರಿ ಮನೆಗೆ ಬಂದ ಮೇಲೆ ಮಗುವನ್ನು ಸ್ಪರ್ಶಿಸುತ್ತಿಲ್ಲ. ದೂರದಿಂದಲೇ ನೋಡಿ, ಮಾತನಾಡಿಸಿ ಖುಷಿ ಪಡುತ್ತಾರೆ.
ಜಿಲ್ಲಾಧಿಕಾರಿಯಾಗಿ ಆಸ್ಪತ್ರೆ ಮತ್ತಿತರ ಕಡೆಗಳಿಗೆ ಭೇಟಿ ನೀಡಬೇಕಾಗುತ್ತದೆ. ಸಭೆಗಳನ್ನು ನಡೆಸಬೇಕಾಗುತ್ತದೆ. ಹೆಚ್ಚಿನ ಮುಂಜಾಗ್ರತ ಕ್ರಮ ಕೈಗೊಂಡರೂ ಸೋಂಕಿನ ಭೀತಿಯನ್ನು ನಿರಾಕರಿಸಲಾಗದು. ಹೀಗಾಗಿ ನನ್ನ ಮನೆಯಲ್ಲಿ ಸ್ವತಃ ಅಂತರವನ್ನು ಕಾಯ್ದುಕೊಂಡು ಪ್ರತ್ಯೇಕ ನಿಗಾದಲ್ಲಿ ಇದ್ದೇನೆ. ಲಾಕ್‌ಡೌನ್ ವಿಸ್ತರಣೆಯಾಗಿರುವುದರಿಂದ ಮಗುವನ್ನು ಶನಿವಾರ ಬೆಂಗಳೂರಿನಲ್ಲಿರುವ ಪತಿಯ ಬಳಿಗೆ ಕಳುಹಿಸಿಕೊಟ್ಟಿದ್ದೇನೆ ಎನ್ನುತ್ತಾರೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್.
ದ.ಕ. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರು ಕೂಡ ತಮ್ಮ ಐದು ವರ್ಷದೊಳಗಿನ ಇಬ್ಬರು ಮಕ್ಕಳೊಂದಿಗೆ ಇದೇ ಕಾರಣಕ್ಕಾಗಿ ಬೆರೆಯುತ್ತಿಲ್ಲ. ಮುಂಜಾಗ್ರತ ಕ್ರಮವಾಗಿ ಮಕ್ಕಳನ್ನು ಮೈಸೂರಿನ ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.