ಹಲ್ಲೆ-ಅವಹೇಳನ ವಿರುದ್ದ ಕಠಿಣ ಕಾನೂನು ಜಾರಿಗೆ ಆಗ್ರಹ-ವೈದ್ಯರ ಪ್ರತಿಭಟನೆ…..
ಪುತ್ತೂರು: ವೈದ್ಯರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ನಡೆಸುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರನ್ನು ಅವಹೇಳನ ಮಾಡುವ ಘಟನೆಗಳು ಹೆಚ್ಚಾಗುತ್ತಿದ್ದು, ಇಂತಹ ಕೃತ್ಯ ಎಸಗುವವರ ವಿರುದ್ಧ ಸರ್ಕಾರ ಗರಿಷ್ಠ ಪ್ರಮಾಣದ ಶಿಕ್ಷೆ ಮತ್ತು ಡಂಡವನ್ನೊಳಗೊಂಡ ಕಠಿಣ ಕಾನೂನು ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆಗ್ರಹಿಸಿ ವೈದ್ಯರು ಶುಕ್ರವಾರ ಪುತ್ತೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇಂಡಿಯನ್ ಮೆಡಿಕಲ್ ಎಸೋಸಿಯೇಶನ್, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಪುತ್ತೂರು ಡಾಕ್ಟರ್ಸ್ ಫೋರಂ ಸಂಘಟನೆಯ ನೇತೃತ್ವದಲ್ಲಿ ಪುತ್ತೂರಿನ ವೈದ್ಯರುಗಳು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು,ಇಂಡಿಯನ್ ಡೆಂಟಲ್ ಎಸೋಸಿಯೇಶನ್ ಸಿಬ್ಬಂದಿ, ವೈದ್ಯಕೀಯೇತರ ಸಿಬ್ಬಂದಿ ಸೇರಿಕೊಂಡು ಪುತ್ತೂರು ಎಪಿಎಂಸಿ ರಸ್ತೆಯ ಪುತ್ತೂರು ಸಿಟಿ ಆಸ್ಪತ್ರೆಯ ಬಳಿಯಿಂದ ಮಿನಿ ವಿಧಾನ ಸೌಧದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಪುತ್ತೂರು ಘಟಕದ ಅಧ್ಯಕ್ಷ ಡಾ.ಗಣೇಶ್ ಮುದ್ರಜೆ ಅವರು, ಕಳೆದ ಹತ್ತು ವರ್ಷಗಳಿಂದ ರೋಗಿ ಹಾಗೂ ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಬೆಳವಣಿಗೆಗಳಿಂದಾಗಿ ವೈದ್ಯರು ಮಾನಸಿಕವಾಗಿ ಕುಗ್ಗಿ ಹೋಗಿ, ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿ ಬರುತ್ತಿದೆ ಎಂದರು. ತಿದ್ದುಪಡಿ ಮಾಡಿದ ಮೋಟಾರು ಕಾಯ್ದೆಯಂತೆ ವೈದ್ಯಕೀಯ ವ್ಯವಸ್ಥೆಯಲ್ಲೂ ಕಠಿಣ ಕಾನೂನು ಕ್ರಮ, ಭಾರೀ ದಂಡ ಹಾಗೂ ದೊಡ್ಡ ಪ್ರಮಾಣದ ಶಿಕ್ಷೆಯ ಕಾನೂನು ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಇಂಡಿಯನ್ ಡೆಂಟಲ್ ಎಸೋಸಿಯೇಶನ್ ಪುತ್ತೂರು ಘಟಕದ ಅಧ್ಯಕ್ಷ ಶ್ರೀಕೃಷ್ಣ ಭಟ್, ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಡಾ.ನಾರಾಯಣ ಎಸ್,ಉಪಾಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ, ಹಾಸ್ಪಿಟಲ್ ಎಸೋಸಿಯೇಶನ್ ಅಧ್ಯಕ್ಷ ಡಾ.ಶ್ರೀಪತಿ ರಾವ್, ಡಾ.ರಾಜಾರಾಮ ಉಪ್ಪಿನಂಗಡಿ, ಡಾ.ಶ್ರೀಪ್ರಕಾಶ್, ಡಾಕ್ಟರ್ಸ್ ಫೋರಂ ಅಧ್ಯಕ್ಷ ಡಾ.ಅವಿನಾಶ್ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.