ಕೊರೊನಾ – 10 ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಸರ್ಕಾರ ಒಪ್ಪಿಗೆ …
ಬೆಂಗಳೂರು : ಕೊರೊನಾ ಪೀಡಿತ ಹತ್ತು ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯ ಡಾ.ಗಿರಿಧರ ಕಜೆ, ಆಯುರ್ವೇದ ಔಷಧಿ ಆರಂಭಕ್ಕೆ ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ. ಮೊದಲು ಕೊರೊನಾ ಆಸ್ಪತ್ರೆಯಲ್ಲಿ ಹತ್ತು ಮಂದಿ ರೋಗಿಗಳಿಗೆ ಆಯುರ್ವೇದ ಗುಳಿಗೆಯನ್ನು ನೀಡಲಾಗುತ್ತದೆ. ಬಳಿಕ ಅದರ ಫಲಿತಾಂಶ ನೋಡಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಡಾ.ಗಿರಿಧರ ಕಜೆ ಅವರನ್ನು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡಿದ್ದು ಆಯುರ್ವೇದ ಔಷಧಿಗೆ ಒಪ್ಪಿಗೆ ನೀಡುವ ಕುರಿತಾಗಿ ತಿಳಿಸಿದ್ದಾರೆ.
ಐಸಿಎಂಆರ್‌ಗೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಕಳುಹಿಸಲಾಗಿತ್ತು. ಆಯುರ್ವೇದ ಚಿಕಿತ್ಸೆಯನ್ನು ಸರ್ಕಾರದಿಂದ ಅಧಿಕೃತವಾಗಿ ಆದೇಶ ಬಂದ ಕೂಡಲೇ ಪ್ರಾರಂಭ ಮಾಡಲಾಗುತ್ತದೆ. ಪ್ರಾಯಶಃ ಎರಡು, ಮೂರು ದಿನಗಳಲ್ಲಿ ಪ್ರಾರಂಭ ಮಾಡಬಹುದು. ಸರ್ಕಾರದ ಸೂಚನೆಯಂತೆ ನಡೆಯಲಾಗುವುದು ಎಂದು ಹೇಳಿದ್ದಾರೆ.