ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವೃಕ್ಷ ರಕ್ಷಾ ಅಭಿಯಾನ ಮತ್ತು ಮಣ್ಣು ಉಳಿಸಿ ಅಭಿಯಾನ…
ಪುತ್ತೂರು: ಮನುಷ್ಯನೂ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳಿಗೆ ಜೀವನಾಡಿಯಾಗಿರುವ ಪರಿಸರವನ್ನು ಸಂರಕ್ಷಿಸುವಲ್ಲಿ ನಾವು ಎಡವುತ್ತಿದ್ದೇವೆ, ಅದರ ಬಗ್ಗೆ ಹೇಳಿಕೆ ಭಾಷಣಗಳಿಗೆ ಮಾತ್ರ ಸೀಮಿತವಾಗುತ್ತಿದ್ದೇವೆ. ಇದು ಬಲುದೊಡ್ಡ ದುರಂತ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ.ಬಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್‍ಎಸ್‍ಎಸ್ ಮತ್ತು ಯೂಥ್ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವೃಕ್ಷ ರಕ್ಷಾ ಅಭಿಯಾನ ಮತ್ತು ಮಣ್ಣು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನವ ಹಸ್ತಕ್ಷೇಪದಿಂದ ಅರಣ್ಯಗಳು ಬಯಲುಗಳಾಗುತ್ತಿವೆ. ಸಸ್ಯ ಸಮೂಹ ನಾಶವಾಗಿ ಪರಿಸರ ಅಸಮತೋಲನಗೊಳ್ಳುತ್ತಿದೆ. ಇದನ್ನು ತಪ್ಪಿಸಲು ಸಸ್ಯ ಸಂಪತ್ತನ್ನು ವೃದ್ದಿಸಿ ಅದನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ನಮ್ಮ ಹಿರಿಯರು ಯಾವ ರೀತಿಯಲ್ಲಿ ಪರಿಸರವನ್ನು ಕಾಪಾಡಿಕೊಂಡು ಬಂದಿದ್ದರೋ ಅದೇ ರೀತಿ ನಾವು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುತ್ತೇವೆ ಎನ್ನುವ ಪ್ರತಿಜ್ಞೆಯನ್ನು ಕೈಗೊಳ್ಳುವ ಆವಶ್ಯಕತೆ ಇದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವುದರ ಮೂಲಕ ನಾವು ಈ ಉತ್ತಮ ಕಾರ್ಯದಲ್ಲಿ ಭಾಗಿಯಾಗೋಣ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಮರಗಳನ್ನು ಉಳಿಸಿ ಬೆಳೆಸುವ ಮತ್ತು ಮಣ್ಣು ಉಳಿಸಿ ಅಭಿಯಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾಲೇಜಿನಿಂದ ನೆಹರೂ ನಗರದವರೆಗೆ ಜಾಥಾವನ್ನು ನಡೆಸಲಾಯಿತು.
ವೃಕ್ಷ ರಕ್ಷಾ ಮತ್ತು ಮಣ್ಣು ಉಳಿಸಿ ಅಭಿಯಾನಕ್ಕೆ ಸಂಬಂದಿಸಿದಂತೆ ವಿದ್ಯಾರ್ಥಿಗಳಿಗೆ ಭಿತ್ತಿಚಿತ್ರ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಂಯೋಜಕಿ ಪ್ರೊ.ನಿಶಾ.ಜಿ.ಆರ್ ಪ್ರಸ್ತಾವಿಸಿ ಸ್ವಾಗತಿಸಿದರು. ರೆಡ್‍ಕ್ರಾಸ್ ಘಟಕದ ಸಂಯೋಜಕ ಪ್ರೊ.ಅಜಯ್ ಶಾಸ್ತ್ರಿ ವಂದಿಸಿದರು. ದಿವ್ಯಶ್ರೀ.ಕೆ ಕಾರ್ಯಕ್ರಮ ನಿರ್ವಹಿಸಿದರು.