ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಎಂಬಿಎ, ಎಂಸಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ…
ಪುತ್ತೂರು: ನಮ್ಮ ಬದುಕು ಅರ್ಥಪೂರ್ಣವಾಗಿರುವಂತೆ ಮತ್ತು ಚೈತನ್ಯಭರಿತವಾಗಿರುವಂತೆ ಮಾಡಿಕೊಳ್ಳಬೇಕಾದರೆ ಉತ್ತಮ ಅಭ್ಯಾಸಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು. ಅವುಗಳ ಜೊತೆಗೆ ಆರೋಗ್ಯಕರ ಹವ್ಯಾಸಗಳನ್ನೂ ಬೆಳೆಸಿಕೊಂಡರೆ ಜೀವನ ಸಮೃದ್ಧವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಎಂಬಿಎ ಮತ್ತು ಎಂಸಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲನೆಯನ್ನು ಮಾಡಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಯೊಬ್ಬರೂ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಕೇವಲ ವೃತ್ತಿಗೆ ಅಥವಾ ಹಣಗಳಿಕೆಯ ರಹದಾರಿಯಾಗಬಾರದು. ಎಲ್ಲರೂ ತಾನು ಸಮಾಜದಿಂದ ಗಳಿಸಿದ ಕೆಲವಂಶವನ್ನಾದರೂ ಸಮಾಜಕ್ಕೆ ನೀಡಿ ರಾಷ್ಟ್ರಪ್ರೇಮವನ್ನು ಮೆರೆಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುವುದಕ್ಕೆ ಬೇಕಾದ ಎಲ್ಲ ಸೌಲಭ್ಯಗಳೂ ಕಾಲೇಜಿನಲ್ಲಿ ಲಭ್ಯವಿವೆ. ಅದನ್ನು ಸಂಪೂರ್ಣವಾಗಿ ಬಳಸಿಕೊಂಡು ಉನ್ನತಿಯನ್ನು ಸಾಧಿಸುವುದು ವಿದ್ಯಾರ್ಥಿಗಳ ಕರ್ತವ್ಯ ಎಂದರು. ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಭಾಗವಾಗಿ ಉತ್ತಮ ವಿದ್ಯಾರ್ಥಿಗಳಾಗಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಪಠ್ಯ ಕ್ರಮಗಳನ್ನು ಕಲಿಯುವುದರ ಜತೆಯಲ್ಲಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕುದಾದ ಪೂರಕ ವಿಷಯಗಳನ್ನು, ಕೌಶಲ್ಯಗಳನ್ನು ಕಲಿಯುವುದು ಅವಶ್ಯಕ. ವೃತ್ತಿ ಜೀವನದಲ್ಲಿ ಅಂಕಗಳ ಜತೆ ತಿಳುವಳಿಕೆಯೂ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉದ್ಯಮ ಸಂಸ್ಥೆಗಳು ಬಯಸುವ ರೀತಿಯಲ್ಲಿ ಹೆಚ್ಚಿನ ಅನುಭವಗಳನ್ನು ಪಡೆದುಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಸೃಜನಶೀಲತೆಯು ನಮ್ಮನ್ನು ಯಶಸ್ಸಿನೆಡೆ ಕೊಂಡೊಯ್ಯುತ್ತದೆ ಎಂದರು.
ಕಾಲೇಜಿನ ಅಡ್ಮಿಶನ್ ಹಾಗೂ ಪ್ಲೇಸ್‍ಮೆಂಟ್ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ನಡೆಯುವ ತಾಂತ್ರಿಕ ಉತ್ಸವದ ಅಂಗವಾಗಿ ಎಂಸಿಎ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ನೂತನ ಜಾಲತಾಣ ಆಂತರ್ಯ ವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ಸ್ವಾಗತಿಸಿ ಎಂಬಿಎ ವಿಭಾಗದ ನಿರ್ದೆಶಕ ಡಾ.ರಾಬಿನ್ ಮನೋಹರ್ ಶಿಂಧೆ ವಂದಿಸಿದರು. ನಿರೀಕ್ಷಾ ಶೆಟ್ಟಿ ಹಾಗೂ ವೇಣುಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.