ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಬಗ್ಗೆ ಸಭೆ ಕರೆಯುವಂತೆ ಸಚಿವರಿಗೆ ಮಂಜುನಾಥ ಭಂಡಾರಿ ಮನವಿ…

ಮಂಗಳೂರು: ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ಹೆಸರಿನಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾವಣಿ ಮಾಡುವುದು ಹಾಗೂ ಅಸೋಸಿಯೇಷನ್ ನಲ್ಲಿ ವಿವಿಧ ಕಂಬಳ ಸಮಿತಿಗಳನ್ನು ಸಂಯೋಜಿಸಿಕೊಳ್ಳುವ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಾ.23ರಂದು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ‘330ನೇ ನಿಯಮದ’ ಅಡಿಯಲ್ಲಿ ಕಂಬಳದ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ಅದಕ್ಕೆ ಪ್ರೋತ್ಸಾಹ ಮತ್ತು ಪ್ರೋತ್ಸಾಹ ಧನ ನೀಡುವ ಬಗ್ಗೆ ಪ್ರಸ್ತಾಪಿಸಿ ನಾನು ಮಾತನಾಡಿದ್ದೆ. ನನ್ನ ಧ್ವನಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಇತರೆ ಶಾಸಕರು ಕೂಡ ಪಕ್ಷ ಭೇದ ಮರೆತು ಬೆಂಬಲಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಚಿವರು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳ ನೇತೃತ್ವದಲ್ಲಿ ಸಂಬಂಧಪಟ್ಟ ಶಾಸಕರುಗಳು, ಅಧಿಕಾರಿಗಳು ಒಂದು ಸಭೆಯನ್ನು ಕರೆದು ಚರ್ಚಿಸುತ್ತೇನೆ ಎಂಬ ಆಶ್ವಾಸನೆಯನ್ನು ಸದನದಲ್ಲಿ ನೀಡಿದ್ದರು. ಕ್ರೀಡಾ ಸಚಿವರ ಆಶ್ವಾಸನೆಯಂತೆ ಎ.19 ರಂದು ವಿಧಾನ ಪರಿಷತ್ತಿನ ಸಭಾಪತಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆದು ಅಧಿಕಾರಿಗಳೊಂದಿಗೆ ಮತ್ತು ಶಾಸಕರೊಂದಿಗೆ ಚರ್ಚಿಸಿದ್ದಾರೆ. ಚರ್ಚಿಸಿದ ನಡವಳಿಯಲ್ಲಿ ಸೂಚಿಸಿರುವಂತೆ, ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ಹಾಗೂ ಅದಕ್ಕೆ ಬೇಕಾದ ಕರಡು ಬೈಲಾ ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆಯಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲಾ ಶಾಸಕರುಗಳು, ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಹಾಗೂ ಕಂಬಳಕ್ಕೆ ಸಂಬಂಧಪಟ್ಟವರ ಸಭೆಯನ್ನು ಕರೆದು ಇದರ ಬಗ್ಗೆ ಚರ್ಚಿಸಿ ಕರಡು ಬೈಲಾ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಅನುವು ಮಾಡಿಕೊಡಬೇಕೆಂದು” ಮಂಜುನಾಥ ಭಂಡಾರಿ ಅವರು ಸಚಿವ ಸುನೀಲ್ ಕುಮಾರ್ ಅವರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.