ವಂದನಾ ರಾಣಿ – ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇ.87 ಅಂಕಗಳೊಂದಿಗೆ ಡಿಸ್ಟಿಂಕ್ಷನ್…

ಮಂಗಳೂರು: ಮಂಗಳೂರಿನ ಭರತಾಂಜಲಿ ಸಂಸ್ಥೆಯ ಹಿರಿಯ ಶಿಷ್ಯೆಯರಲ್ಲಿ ಒಬ್ಬಳಾದ ವಂದನಾ ರಾಣಿ ಅವರು ಕೆಎಸ್‌ಇಇಬಿ ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇ.87 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಗಳಿಸುವುದರೊಂದಿಗೆ ದಕ್ಷಿಣ ಕನ್ನಡದಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಆಕೆಯ ಹದಿನಾಲ್ಕು ವರ್ಷಗಳ ಕಾಲದ ಭರತನಾಟ್ಯದ ಪಯಣದಲ್ಲಿ ನಿರಂತರ ಪರಿಶ್ರಮ, ಕೊನೆಯಿಲ್ಲದ ಉತ್ಸಾಹ ಮತ್ತು ನಿರಂತರ ಅಭ್ಯಾಸಗಳು ಈ ಗಮನಾರ್ಹ ಸಾಧನೆಯನ್ನು ಮಾಡುವಲ್ಲಿ ಸಾಧ್ಯವಾಗಿಸಿವೆ.
ಶ್ರೀ ಕೇದಿಗೆ ವಸಂತ ರಾವ್ ಮತ್ತು ಶ್ರೀಮತಿ ರೂಪಾ ರಾಣಿ ಅವರ ಪುತ್ರಿಯಾಗಿರುವ ವಂದನಾ ರಾಣಿ ಅವರು ಮಂಗಳೂರಿನ ಭರತಾಂಜಲಿ ಸಂಸ್ಥೆಯ ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಮತ್ತು ಗುರು ಶ್ರೀ ಶ್ರೀಧರ್ ಹೊಳ್ಳ ಇವರ ಶಿಷ್ಯೆ.
ಇವರು ಭರತಾಂಜಲಿ ಸಂಸ್ಥೆಯ ಪ್ರಮುಖ ನೃತ್ಯಗಾರರಲ್ಲಿ ಒಬ್ಬರು ಮತ್ತು ಚಿದಂಬರದಲ್ಲಿ ನಾಟ್ಯಾಂಜಲಿ ಉತ್ಸವ, ಮೈಸೂರು ದಸರಾ, ಹಂಪಿ ಉತ್ಸವ, ಆಳ್ವಾಸ್ ನುಡಿಸಿರಿ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ತಮ್ಮ ಗುರುಗಳೊಂದಿಗೆ ಪ್ರದರ್ಶನ ನೀಡಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ಹಿರಿಯ ಶ್ರೇಣಿಯನ್ನು ಪೂರ್ಣಗೊಳಿಸಿದ ಇವರು, ಗುರು ಶ್ರೀಮತಿ ಸತ್ಯವತಿ ಮುಡಂಬಡಿತ್ತಾಯ ಅವರಲ್ಲಿ ಒಂದು ದಶಕದ ತರಬೇತಿಯನ್ನು ಮತ್ತು ಗುರು ಶ್ರೀ ಮಧೂರು ಬಾಲಸುಬ್ರಹ್ಮಣ್ಯ, ಉಡುಪಿ ಇವರಲ್ಲಿ ಸಂಗೀತ ತರಬೇತಿಯನ್ನು ಪಡೆದಿದ್ದಾರೆ.
ವಂದನಾ ರಾಣಿ ಅವರು ಭರತಾಂಜಲಿ ಸಂಸ್ಥೆಯ ಹಲವಾರು ನೃತ್ಯ ಪ್ರದರ್ಶನಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡುಗಾರಿಕೆ ಮಾಡಿದ್ದಾರೆ. ಅವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಶುದ್ಧ ವಿಜ್ಞಾನದಲ್ಲಿ ಪದವಿಯನ್ನು ಪೂರ್ಣಗೊಳಿಸಿ, ಪ್ರಸ್ತುತ ತಮಿಳುನಾಡಿನ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುತ್ತಿದ್ದಾರೆ.

IMG 20220331 WA0006 300x188

IMG 20220331 WA0007 300x200

Related Articles