ಕನಕ ಸಾಹಿತ್ಯದ ತುಳು ಅನುವಾದ ಕೃತಿಗಳ ಅವಲೋಕನ…

ಮಂಗಳೂರು: ‘ಯಾವುದೇ ಭಾಷೆ ತನ್ನ ಸಹಜ ಚೌಕಟ್ಟನ್ನು ಮೀರಿ ಬೆಳೆಯಬೇಕಾದರೆ ಸಾಹಿತ್ಯದ ಅನುವಾದ ತುಂಬಾ ಮುಖ್ಯ. ಇತರ ಭಾಷೆಯ ಸಾಹಿತ್ಯ ತುಳು ಭಾಷೆಗೆ ಬರುವಂತಹದ್ದು, ತುಳುವಿನ ಪಾಡ್ಡನ ಸೇರಿದಂತೆ ತುಳು ಸಾಹಿತ್ಯ ಇತರ ಭಾಷೆಗಳಿಗೆ ಅನುವಾದಗೊಳ್ಳುವಂತಹ ಕೆಲಸಗಳು ನಡೆಯಬೇಕಾಗಿದೆ’ ಎಂದು ಹಿರಿಯ ವಿದ್ವಾಂಸ ಪ್ರೊ.ಎ. ವಿ.ನಾವಡ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭವನದ ಸಿರಿ ಚಾವಡಿಯಲ್ಲಿ ಆಯೋಜಿಸಿದ ತುಳು ಭಾಷೆಗೆ ಅನುವಾದಿಸಲಾದ ಕನಕದಾಸರ ಸಮಗ್ರ ಸಾಹಿತ್ಯ ಕೃತಿಗಳ ಸಂವಾದ ಹಾಗೂ ಕಾವ್ಯ ವಾಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರದ ಸಂತ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಅನುವಾದಿಸಿದ ಕನಕದಾಸರ ಕಾವ್ಯ ‘ಮೋಹನ ತರಂಗಿಣಿ’, ‘ಹರಿಭಕ್ತಿ ಸಾರ’, ‘ರಾಮಧಾನ್ಯ ಚರಿತೆ’, ‘ನಳಚರಿತ್ರೆ’ , ‘ಕೀರ್ತನೆ ಮತ್ತು ಮುಂಡಿಗೆಗಳು’ ಇವುಗಳನ್ನು ಪ್ರೊ. ಎ.ವಿ.ನಾವಡ ಅವರ ಸಂಪಾದಕತ್ವದಲ್ಲಿ ವಿವಿಧ ಸಾಹಿತಿಗಳ ಪಾಲ್ಗೊಳ್ಳುವಿಕೆಯಲ್ಲಿ ತುಳುವಿಗೆ ಅನುವಾದಿಸಲಾಗಿದ್ದು, ಈ ಕೃತಿಗಳ ಬಗ್ಗೆ ಒಂದು ಸಮಗ್ರ ಅವಲೋಕನ ನಡೆಸಲಾಯಿತು.

ಮೌಲ್ಯಗಳ ಸೇತುವೆ:
ಕೃತಿಗಳ ಅವಲೋಕನ ನಡೆಸಿದ ತುಳು – ಕನ್ನಡ ವಿದ್ವಾಂಸ ಪ್ರೊ. ಬಿ.ಶಿವರಾಮ ಶೆಟ್ಟಿ ಮಾತನಾಡಿ, ‘ಭಾಷಾಂತರ ಕೇವಲ ಪದಗಳ ವರ್ಗಾವಣೆ ಅಲ್ಲ;ಅದು ಒಂದು ಸಂಸ್ಕೃತಿ, ಚಿಂತನೆ ಮತ್ತು ಮೌಲ್ಯಗಳನ್ನು ಮತ್ತೊಂದು ಭಾಷೆಯ ಓದುಗರಿಗೆ ತಲುಪಿಸುವ ಸೇತುವೆಯಾಗಿದೆ. ಕನಕದಾಸರ ಅಧ್ಯಯನವು ಕೇವಲ ಸಾಹಿತ್ಯಕ ದೃಷ್ಟಿ ಯಿಂದ ಮಾತ್ರವಲ್ಲ, ಸಾಮಾಜಿಕ ಮತ್ತು ಸಾಂಸ್ಕೃ ತಿಕ ನೆಲೆಗಟ್ಟಿನಲ್ಲಿಯೂ ನಡೆಯಬೇಕು’ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಉಪನ್ಯಾಸಕರಾದ ರಘು ಇಡ್ಕಿದು, ಡಾ.ಸುಧಾರಾಣಿ ಕೃತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಅನುವಾದಕರಿಗೆ ಗೌರವ:
ಕೃತಿ ಅನುವಾದಕರಾದ ಆತ್ರಾಡಿ ಆಮೃತಾ ಶೆಟ್ಟಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಟಿ.ಎ.ಎನ್. ಖಂಡಿಗೆ, ಮುದ್ದು ಮೂಡುಬೆಳ್ಳೆ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಡಾ. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರು ಅವರಿಗೆ ಪುಸ್ತಕಗಳನ್ನು ನೀಡಿ ಗೌರವಿಸಿದರು.

ತುಳು ಕೃತಿ ಬಿಡುಗಡೆ:
ಅಕಾಡೆಮಿಯ ‘ನಮ್ಮ ತುಳುವೆರ್’ ಮಾಲಿಕೆಯಲ್ಲಿ ಪ್ರಕಟಿಸಲಾದ ರಘು ಇಡ್ಕಿದು ಅವರು ರಚಿಸಿದ ‘ತುಳು ಕನ್ನಡೊದ ಮಾಮಲ್ಲ ಸಂಶೋಧಕೆರ್ ಪ್ರೊ.ಎ.ವಿ.ನಾವಡೆರ್’ ಕೃತಿಯನ್ನು ಪ್ರೊ. ಶಿವರಾಮ ಶೆಟ್ಟಿ ಅವರು ಬಿಡುಗಡೆ ಮಾಡಿದರು.

ಕೀರ್ತನೆಗಳ ಗಾಯನ:
ಜಾನಪದ ಕಲಾವಿದ ನಾದಾ ಮಣಿನಾಲ್ಕೂರು ಅವರಿಂದ ಕನಕದಾಸರ ತುಳು ಕೀರ್ತನೆ ಹಾಗೂ ಅನುವಾದಿತ ಕಾವ್ಯ ಭಾಗಗಳ ಗಾಯನ ಕಾರ್ಯಕ್ರಮ ನಡೆಯಿತು. ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್‌ ರೈ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯೆ ಅಕ್ಷಯ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Whatsapp Image 2026 06 15 At 1.12.47 Pm 300x174

Whatsapp Image 2026 06 15 At 1.12.48 Pm 1 300x120

Related Articles