ರಾಷ್ಟೀಯ ರಸ್ತೆ ಸುರಕ್ಷತಾ ಮಾಸ ಅಂಗವಾಗಿ ಬೀದಿ ನಾಟಕ ಪ್ರದರ್ಶನ…
ಬಂಟ್ವಾಳ: ದ.ಕ.ಪೋಲೀಸ್ ಇಲಾಖೆ ಮತ್ತು ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳು ರಾಷ್ಟೀಯ ರಸ್ತೆ ಸುರಕ್ಷತಾ ಮಾಸ ಅಂಗವಾಗಿ ರಸ್ತೆ ಸುರಕ್ಷೆ- ಜೀವನ ರಕ್ಷೆ ಎಂಬ ಬೀದಿ ನಾಟಕವನ್ನು ಬಿ.ಸಿ.ರೊಡಿನ ಜಂಕ್ಷನ್‍ನಲ್ಲಿ ಜ. 29 ರಂದು ಸಂಜೆ ಪ್ರದರ್ಶಿಸಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದರು.
ಕಾಲೇಜಿನ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥೆ ಡಾ. ಶ್ವೇತಾ ರಸ್ಕಿನ ಇವರ ನೇತೃತ್ವದಲ್ಲಿ 40 ವಿದ್ಯಾರ್ಥಿಗಳ ತಂಡವು ರಸ್ತೆ ಅಪಘಾತವಾಗಲು ಕಾರಣ ಮತ್ತು ಪರಿಹಾರವನ್ನು ತಿಳಿಸುವ ವಿವಿಧ ಘಟನೆಗಳನ್ನು ಒಳಗೊಂಡ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಹಿರಿಯ ಪತ್ರಕರ್ತ, ಉಪನ್ಯಾಸಕ ಜಯಾನಂದ ಪೆರಾಜೆ ಮಾತನಾಡಿ, ವಿದ್ಯಾರ್ಥಿಗಳ ಬೀದಿ ನಾಟಕ ಪ್ರಸ್ತುತಿಯ ಬಗ್ಗೆ ಅಭಿನಂದನೆ ಸಲ್ಲಿಸಿದರು. ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸುವ ಬಗ್ಗೆ ಗಮನ ಹರಿಸಬೇಕೆಂದು ತಿಳಿಸಿದರು. ಡಿವೈಎಸ್ಪಿ ವೆಲೈಂಟೆನ್ ಡಿಸೋಜ ಅವರು ಮಾತನಾಡಿ ಅಪಘಾತಗಳು ಚಾಲಕರ ಅಜಾಗರೂಕತೆಯಿಂದ ನಡೆಯುವುದನ್ನು ತಪ್ಪಿಸಬೇಕು. ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು. ಬಂಟ್ವಾಳ ಟ್ರಾಫಿಕ್ ಎಸ್‍ಐ ರಾಜೇಶ್ ಮತ್ತು ಬಂಟ್ವಾಳ ನಗರ ಠಾಣಾ ಪೋಲೀಸರು ಸಹಕರಿಸಿದರು.