ಅ. 29 ರಂದು ಸುಳ್ಯ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ -ಟಿ.ಎಂ.ಶಹೀದ್ ತೆಕ್ಕಿಲ್…

ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನೈತಿಕ ಪೊಲೀಸ್‌ಗಿರಿಗೆ ಖಂಡನೆ...

ಸುಳ್ಯ: ರಾಜ್ಯದಲ್ಲಿ ಮುಸ್ಲಿಂ ಸಮುದಾಯವನ್ನು ದಮನಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳಾಗುತ್ತಿದೆ. ಇದಕ್ಕೆ ಸರಕಾರ ಕೂಡ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಇದರ ವಿರುದ್ದವಾಗಿ ಅ.29 ರಂದು ಸುಳ್ಯ ತಾಲೂಕು ಕಚೇರಿ ಎದುರು ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಹಾಗೂ ಜಾತ್ಯತೀತ ನಾಯಕರನ್ನು ಸೇರಿಸಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಮುಸ್ಲಿಂ ಯೂತ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.

ಸುಳ್ಯದಲ್ಲಿ ತುರ್ತು ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಹೆಚ್ಚಾಗುತ್ತಿದೆ. ಕಡಬದ ಕಾಣಿಯೂರಿನಲ್ಲಿ ಬಟ್ಟೆ ವ್ಯಾಪಾರಿಗಳ ಮೇಲೆ ನಡೆದ ಘಟನೆ ಖಂಡನೀಯ. ಅವರು ತಪ್ಪು ಮಾಡಿದ್ದರೆ ಅವರನ್ನು ಶಿಕ್ಷಿಸಲು ಪೊಲೀಸ್ ಇಲಾಖೆ ಇದೆ. ತಾಲಿಬಾನ್ ಸಂಸ್ಕೃತಿಯ ರೀತಿ ನೈತಿಕ ಪೊಲೀಸ್‌ಗಿರಿ ಮಾಡುವುದು ಸರಿಯಲ್ಲ ಎಂದ ಅವರು ಎರಡು ಧರ್ಮಗಳಲ್ಲಿ ಕೆಲವು ಕಿಡಿಗೇಡಿಗಳಿದ್ದಾರೆ. ಸಮಾಜದ ಸ್ವಾಸ್ತ್ಯ ಕೆಡವುತ್ತಿದ್ದಾರೆ. ಇದರಿಂದ ಈ ಸಮಾಜದ ಹೆಸರು ಕೆಡುತ್ತಿದೆ. ಸರಕಾರ ಕೂಡ ಮುಸ್ಲಿಂ ಸಮುದಾಯವನ್ನು ಕಡೆಗಣಿಸುತ್ತಿದೆ. ರಾಜ್ಯದಲ್ಲಿ ಹತ್ಯೆಯಾದ ಅಲ್ಪಸಂಖ್ಯಾತ ಸಮುದಾಯದವರಿಗೆ ಪರಿಹಾರ ನೀಡಿಲ್ಲ. ಮಾನವ ಧರ್ಮ ಕಾಪಾಡಲು ಸರಕಾರ ವಿಫಲವಾಗಿದೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಗಡಿ ಭಾಗಗಳ ಸಹಿತ ಮೂಲೆ ಮೂಲೆಗಳಲ್ಲಿ ಪೊಲೀಸ್ ಇಲಾಖೆ ಸಿಸಿಟಿವಿಗಳನ್ನು ಅಳವಡಿಸಬೇಕು. ಇದಕ್ಕೆ ಇಲಾಖೆ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಅಲ್ಲದೇ ರಾಜ್ಯ ಸರಕಾರ ಮುಸ್ಲಿಂ ಸಮುದಾಯದ ಪ್ರಾಶಸ್ತ್ಯ ಕಸಿಯುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಸರಕಾರಿ ಉದ್ಯೋಗದ ಮೀಸಲಾತಿ ಮತ್ತು ರಾಜಕೀಯ ಮೀಸಲಾತಿ ಕಡಿತ ಮಾಡಲು ಸರಕಾರ ಹೊರಟಿದೆ. ಇದರ ವಿರುದ್ದವು ಹೋರಾಟ ಮಾಡಲಾಗುವುದು ಎಂದರು.
ಕಾನೂನು ಸುವ್ಯವಸ್ಥೆ ವೈಫಲ್ಯ, ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ನಿರಂತರ ದಬ್ಬಾಳಿಕೆ ಹಾಗೂ ಪ್ರಸ್ತುತ ಸರಕಾರಿ ಪ್ರಯೋಜಕತ್ವದಲ್ಲಿ ಆಗುತ್ತಿರುವ ಗೊಂದಲಗಳು ಖಂಡನೀಯ. ದಿನವೂ ಮುಸಲ್ಮಾನರ ಹೆಸರಿನಲ್ಲಿ ಆಗುತ್ತಿರುವ ವಿಭಜನೆ ರಾಜಕೀಯದಲ್ಲಿ ಮತ ಪಡೆಯುವ ಹುನ್ನಾರ, ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ.ಯಾಕೆ ಈ ರೀತಿ ವಿಭಜನೆ ಆಗುತ್ತಿದೆ ಮತ್ತು ಇದಕ್ಕೆ ಏನು ಪರಿಹಾರ ಎಂಬ ಬಗ್ಗೆ ಹೈಕೋರ್ಟಿನ ನ್ಯಾಯಾದೀಶರ ನೇತೃತ್ವದಲ್ಲಿ ತನಿಖೆ ಅಗತ್ಯವಿದೆ ಮತ್ತು ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಆಗ್ರಹಿಸಿದರು.
ಕೆಲವು ಸರಕಾರಿ ಅಧಿಕಾರಿಗಳು ಹಾಗೂ ನೌಕರರು ನ್ಯಾಯಯುತವಾಗಿ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುವುದನ್ನು ಬಿಟ್ಟು ಕೆಲವರ ಕೈಗೊಂಬೆಯಾಗಿರುವುದು ಸಹಿಸಲು ಸಾಧ್ಯವಿಲ್ಲ. ಗೂಂಡಾ ಸಂಸ್ಕೃತಿ, ತಾಲಿಬಾನ್ ಸಂಸ್ಕೃತಿ ಬೆಳೆಯುತ್ತಿದ್ದು ಪೊಲೀಸ್ ಇಲಾಖೆಯು ಇದನ್ನ ಮಟ್ಟ ಹಾಕದಿರುವುದೇ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ ಎಂದರು.
ಪತ್ರಿಕಾಗೋಷ್ಠಿ ಯಲ್ಲಿ ರಾಜ್ಯ ಅಲ್ಪ ಸಂಖ್ಯಾತರ ಕಾಂಗ್ರೇಸ್ ಘಟಕದ ಕಾರ್ಯದರ್ಶಿ, ಸಂಪಾಜೆ ಗ್ರಾ.ಪಂ. ಸದಸ್ಯ ಅಬುಸಾಲಿ ಗೂನಡ್ಕ , ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ಅಲ್ಪಸಂಖ್ಯಾತ ಘಟಕದ ಉಪಾದ್ಯಕ್ಷ ಹನೀಫ್ ಬೀಜಕೊಚ್ಚಿ ಉಪಸ್ಥಿತರಿದ್ದರು.

Sponsors

Related Articles

Back to top button