ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ- ಇಂಜಿನಿಯರ್ಸ್ ಡೇ ದಿನಾಚರಣೆ…
ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಸೃಷ್ಟಿಕ ವತಿಯಿಂದ ಇಂಜಿನಿಯರ್ಸ್ ಡೇ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಹಿರಿಯ ಸಿವಿಲ್ ಇಂಜಿನಿಯರ್, ಮಂಜೇಶ್ವರ ಟೆಕ್ನೋ ಟ್ರೇಡ್ಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಅನಿಲ್ ವಾಮನ್ ಬಾಳಿಗಾ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್ಕ್ಯುಬೇಷನ್ ಹಾಗೂ ಸ್ಟಾರ್ಟ್ ಅಪ್ ನಿರ್ದೇಶಕರಾದ ಡಾ. ನವೀನ್ ಬಪ್ಪಳಿಗೆ ಯವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಸಂಚಾಲಕರು ಹಾಗೂ ಸೃಷ್ಟಿಕ ಸಮನ್ವಯಕಾರರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಶ್ರೀ ಅನಿಲ್ ವಾಮನ್ ಬಾಳಿಗಾ ರವರು ಮಾತನಾಡಿ, ಆಧುನಿಕ ಹಾಗೂ ಸಧೃಡ ರಾಷ್ಟ್ರ ನಿರ್ಮಾಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ರವರು ನೀಡಿದ ಗಣನೀಯ ಕೊಡುಗೆಯನ್ನು ವಿವರಿಸಿದರು. ಭಾರತವು ಇಂದು ಮುಂದುವರಿದ ರಾಷ್ಟ್ರವಾಗಿದೆ, ಹಲವಾರು ಮೂಲಸೌಕರ್ಯ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ, ಇದರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ರವರಂತಹ ಮಹಾನ್ ಸಾಧಕರ ಕೊಡುಗೆ ಇದೆ. ಸರ್ ಎಂ. ವಿಶ್ವೇಶ್ವರಯ್ಯ ರವರಂತಹ ಮತ್ತೋರ್ವ ಶ್ರೇಷ್ಠ ಇಂಜಿನಿಯರ್ ಸಿಗಲು ಸಾಧ್ಯವಿಲ್ಲ, ಅವರು ದೇಶದ ಎಲ್ಲಾ ಇಂಜಿನಿಯರಿಂಗ್ ವೃತ್ತಿಪರರಿಗೆ ಮಾದರಿ ಹಾಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು ಹಾಗೂ ಇಂಜಿನಿಯರ್ಸ್ ಡೇ ದಿನಾಚರಣೆಯ ಶುಭಾಶಯಗಳನ್ನು ಹಾರೈಸಿದರು.
ಡಾ. ನವೀನ್ ಬಪ್ಪಳಿಗೆ ಯವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾವೀನ್ಯತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸರ್ ಎಂ. ವಿಶ್ವೇಶ್ವರಯ್ಯ ರವರು ನಾವೀನ್ಯತೆಯಲ್ಲಿ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ, ಉತ್ತಮ ಜೀವನಕ್ಕೆ ಹೊಸ ತಂತ್ರಜ್ಞಾನವು ಬಹಳ ಮುಖ್ಯವಾಗಿದೆ, ಆದ್ದರಿಂದ ಯುವಜನತೆಯು ಸರ್ ಎಂ. ವಿಶ್ವೇಶ್ವರಯ್ಯ ರವರ ಸಾಧನೆಗಳನ್ನು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾಗಬೇಕು ಎಂದು ಹೇಳಿದರು.
ಅಧ್ಯಕ್ಹೀಯ ಭಾಷಣವನ್ನು ಮಾಡಿದ ಡಾ. ಥಾಮಸ್ ಪಿಂಟೋ ರವರು ಮಾತನಾಡಿ, ಭಗವದ್ಗೀತೆಯಲ್ಲಿ ಉಲ್ಲೇಖಿಸಿದ “ಯೋಗ: ಕರ್ಮಸು ಕೌಶಲಮ್” ಧ್ಯೇಯವನ್ನು ತಮ್ಮ ಮನೆಯಲ್ಲಿ, ಮನದಲ್ಲಿ ಹಾಗೂ ವೃತ್ತಿಜೀವನದಲ್ಲಿ ಸಮರ್ಥವಾಗಿ ಅಳವಡಿಸಿಕೊಂಡಿದ್ದ ಸರ್ ಎಂ. ವಿಶ್ವೇಶ್ವರಯ್ಯರವರ ಜೀವನ ಶೈಲಿ, ಕಾರ್ಯಕ್ಷಮತೆ ಮತ್ತು ಅವರ ಕೊಡುಗೆಯನ್ನು ಶ್ಲಾಘಿಸಿದರು. ಶಿಸ್ತಿನ ಸಿಪಾಯಿ, ಸ್ವಾಭಿಮಾನಿ ಹೆಮ್ಮೆಯ ಕನ್ನಡಿಗ, ಅಪಾರ ದೂರದರ್ಶಿತ್ವವನ್ನು ಹೊಂದಿದ್ದ ಸರ್ ಎಂ. ವಿಶ್ವೇಶ್ವರಯ್ಯರವರು ಕಡಿದಾಳ್ ಮಂಜಪ್ಪ ಮತ್ತು ಕೆಂಗಲ್ ಹನುಮಂತಯ್ಯರವರ ಜೊತೆಗೆ ನಿರ್ವಹಿಸಿದ ಹಲವಾರು ಯೋಜನೆಗಳನ್ನು ಮತ್ತು ಅವರ ಜೀವನದ ಕೆಲವು ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದರು. ದಿನಂಪ್ರತಿ ಹದಿನೆಂಟು ಗಂಟೆಗೂ ಅಧಿಕ ಸಮಯ ಕರುನಾಡಿಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದ ಮಹಾನ್ ಚೇತನ, ಭಾರತ ರತ್ನ, ಸರ್ ಎಂ. ವಿಶ್ವೇಶ್ವರಯ್ಯರವರು ಎಂದೆಂದಿಗೂ ನಮ್ಮ ಮನದಲ್ಲಿ ಶಾಶ್ವತವಾಗಿ ಇರುತ್ತಾರೆ, ಇಂತಹ ಮಹಾನ್ ಸಾಧಕರನ್ನು ಪಡೆದ ನಮ್ಮ ಕರುನಾಡು ಧನ್ಯ ಎಂದು ಡಾ. ಥಾಮಸ್ ಪಿಂಟೋ ರವರು ಹೇಳಿದರು.
ಪ್ರೊ. ಕೆ. ಶ್ರೀನಾಥ್ ರಾವ್ ರವರು ಸ್ವಾಗತ ಭಾಷಣವನ್ನು ಮಾಡಿದರು ಹಾಗೂ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಕುಮಾರಿ ಮಾಧುರಿ ಉಪಾಧ್ಯಾಯ ಪ್ರಾರ್ಥನೆಯನ್ನು ಮಾಡಿದರು. ಪ್ರೊ. ಶಿಲ್ಪಾ ಎಸ್. ವಂದನಾರ್ಪಣೆ ಸಲ್ಲಿಸಿದರು. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯಾ ಬೆಟ್ಟಿನ್ ಕಾರ್ಯಕ್ರಮವನ್ನು ನಿರೂಪಿಸಿದರು.ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ:ಪ್ರೊ. ಶ್ರೀನಾಥ್ ರಾವ್ ಕೆ.