ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಹಾಕಥಾನ್-2023 ಸ್ಪರ್ಧೆ…
ಪುತ್ತೂರು: ದಿನದಿನವೂ ತಂತ್ರಜ್ಞಾನದಲ್ಲಿ ಅಗಾಧ ಬೆಳವಣಿಗೆಗಳಾಗುತ್ತಿದೆ, ಅದಕ್ಕೆ ತಕ್ಕಂತೆ ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳದೇ ಹೋದರೆ ಬಹಳ ಹಿಂದುಳಿಯುತ್ತೇವೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ (AIML) ವಿಭಾಗ, IEEE ವಿದ್ಯಾರ್ಥಿ ವಿಭಾಗ ಮತ್ತು IEEE ಮಂಗಳೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಹಾಕಥಾನ್-2023 ಸ್ಪರ್ಧೆಗೆ ಚಾಲನೆಯನ್ನು ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಸಮಾಜದ ಒಳಿತಿಗೆ ಬಳಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ ವಿವಿಧ ವಿಷಯಗಳನ್ನು ಕಲಿಯುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ, ಬುದ್ಧಿ ಚುರುಕಾಗುತ್ತದೆ, ಉದ್ಯೋಗದಲ್ಲಿ ಮಾತ್ರವಲ್ಲ ಜೀವನ ಪಯಣದಲ್ಲಿಯೂ ಉನ್ನತಿ ಪ್ರಾಪ್ತಿಯಾಗುತ್ತದೆ ಎಂದರು. ಸವಾಲುಗಳನ್ನು ಎದುರಿಸುವ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸಬೇಕು, ಕಾಲೇಜು ಅದಕ್ಕೆ ಸೂಕ್ತ ಪ್ರೋತ್ಸಾಹವನ್ನು ನೀಡುತ್ತದೆ ಎಂದರು.
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಶಿನ್ ಲರ್ನಿಂಗ್ ವಿಭಾಗ ಮುಖ್ಯಸ್ಥ ಡಾ.ಗೋವಿಂದರಾಜ್.ಪಿ, ಐಇಇಇ ವಿದ್ಯಾರ್ಥಿ ವಿಭಾಗದ ಸಂಯೋಜಕಿ ಡಾ.ಜೀವಿತ, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಕಿರಣ್.ಸಿ.ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐಇಇಇ ವಿದ್ಯಾರ್ಥಿ ವಿಭಾಗದ ಸಹ ಸಂಯೋಜಕಿ ಪ್ರೊ.ರಜನಿ ರೈ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಕಿ ಪ್ರೊ.ವೈಷ್ಣವಿ ವಂದಿಸಿದರು. ಅಪೇಕ್ಷಾ ಪ್ರಸ್ತಾವನೆಗೈದರು. ಆಕಾಶ್ ರೈ ಹಾಗೂ ಶ್ರೀನಿಧಿ ಕಾರ್ಯಕ್ರಮ ನಿರ್ವಹಿಸಿದರು.
24 ಗಂಟೆಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳ 217 ವಿದ್ಯಾರ್ಥಿಗಳು ಭಾಗವಹಿಸಿದರು.