ಅಡಕೆ ಬೆಳೆಗಾರರ ವೈಚಾರಿಕ ಸಮ್ಮಿಲನ …..
ಪುತ್ತೂರು: ಅಡಕೆ ಬೆಳೆಗಾರರೂ ಸೇರಿದಂತೆ ಎಲ್ಲ ರೈತರ ಉನ್ನತಿಯಲ್ಲಿ ಸಹಕಾರಿ ಸಂಘಗಳ ಪಾತ್ರವಿದೆ. ಕರಾವಳಿ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಅದಕ್ಕೆ ಸಹಕಾರಿ ಸಂಘಗಳು ರೈತರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುತ್ತಿರುವುದೇ ಕಾರಣವಾಗಿದ್ದು, ಮೀಟರ್ ಬಡ್ಡಿ ದಂಧೆಗೆ ಸಹಕಾರಿ ಸಂಘಗಳು ಕಡಿವಾಣ ಹಾಕಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.
ಅವರು ಅರೇಕನಟ್ ಗ್ರೋವರ್ಸ್ ವಾಟ್ಸಪ್ ಗ್ರೂಪ್ ಮತ್ತು ಕ್ಯಾಂಪ್ಕೋ ಸಂಸ್ಥೆಯ ಸಹಯೋಗದಲ್ಲಿ ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಭವನದಲ್ಲಿ ಬುಧವಾರ ನಡೆದ ಒಂದು ದಿನದ `ಅಡಕೆ ಬೆಳೆಗಾರರ ವೈಚಾರಿಕ ಸಮ್ಮಿಲನ’ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಡಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ರೈತರೂ ಸೇರಿದಂತೆ ನಾವೆಲ್ಲ ತಂತ್ರಜ್ಞಾನದ ಬೆಳವಣಿಗೆಗೆ ಸರಿಯಾಗಿ ಅಪ್‍ಡೇಟ್ ಆಗದಿದ್ದರೆ ಔಟ್‍ಡೇಟ್ ಆಗುವ ಅಪಾಯವಿದೆ. ಪ್ರಸ್ತುತ ತಂತ್ರಜ್ಞಾನದ ಬದಲಾವಣೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ಮತ್ತೊಂದು ಕಡೆ ತಂತ್ರಜ್ಞಾನದಿಂದಾಗಿ ಜನ ಕೆಲಸ ಕಳೆದುಕೊಳ್ಳುವ ವಿದ್ಯಮಾನವೂ ನಡೆಯುತ್ತಿದೆ. ಹಾಗೆಂದ ಮಾತ್ರಕ್ಕೆ ತಂತ್ರಜ್ಞಾನವೇ ಸರ್ವಶ್ರೇಷ್ಠವಲ್ಲ. ಅದರ ಹಿಂದಿರುವವ ನಿರ್ಧಾರ ಶ್ರೇಷ್ಠವಾದುದು. ಬೆಲೆ ಅಸ್ಥಿರತೆ, ವಾಯುಗುಣದ ಬದಲಾವಣೆ, ಮಾರುಕಟ್ಟೆ ಇತ್ಯಾದಿಗಳು ತಂತ್ರಜ್ಞಾನದ ಫಲವಾಗಿ ಸುಧಾರಿಸಿದರೆ ನಿಜಕ್ಕೂ ಅದ್ಭುತ. ಇಲ್ಲದಿದ್ದರೆ ನಾವು ತಂತ್ರಜ್ಞಾನದ ಪ್ರಯೋಜನದ ಬಗ್ಗೆ ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ. ದೇಶದ ಪ್ರಗತಿ ಅಳೆಯಲು ಜಿಡಿಪಿ ಇರುವಂತೆ ವ್ಯಕ್ತಿಯ ಪ್ರಗತಿಯನ್ನು ಯಾವ ರೀತಿ ಅಳೆಯಬಹುದು. ಸಂಪತ್ತು ಅಥವಾ ಮಾನಸಿಕ ನೆಮ್ಮದಿಯಿಂದಲೇ ಎಂಬ ಬಗ್ಗೆ ಚರ್ಚೆ ನಡೆಯಬೇಕು. ತಂತ್ರಜ್ಞಾನದಿಂದ ನಮಗೆ ಇವೆರಡರಲ್ಲಿ ಯಾವುದನ್ನು ನೀಡಿದೆ ಎಂಬ ವಿಮರ್ಶೆ ನಡೆಯಬೇಕು ಎಂದರು.
ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ಮಾತನಾಡಿ, ಅಡಕೆ ಮಾರುಕಟ್ಟೆ ಸಂರಕ್ಷಿಸಲು, ಬೆಲೆ ಸ್ಥಿರೀಕರಣ ಕಾಪಾಡಿಕೊಳ್ಳಲು ಕ್ಯಾಂಪ್ಕೋ ಸತತ ಪ್ರಯತ್ನ ಮಾಡುತ್ತಾ ಬಂದಿದೆ ಎಂದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ಚಂದ್ರ ಕಲ್ಮಡ್ಕ ವಂದಿಸಿದರು.