ಕೊರೊನ ಲಾಕ್ ಡೌನ್ – ಸುಳ್ಯದಲ್ಲಿ ಸಹಾಯಕ ಕಮಿಷನರ್ ಸಭೆ….
ಸುಳ್ಯ: ಕೊರೊನ ಲಾಕ್ ಡೌನ್ ಹಿನ್ನಲೆಯಲ್ಲಿ ನ.ಪಂ ವ್ಯಾಪ್ತಿಯ ನಾಗರಿಕರಿಗೆ ನೀಡುವ ಸೌಲಭ್ಯಗಳ ಬಗ್ಗೆ ಪುತ್ತೂರು ಸಹಾಯಕ ಕಮಿಷನರ್ ನೇತ್ರತ್ವದಲ್ಲಿ ನ.ಪಂ ಸಭಾಂಗಣದಲ್ಲಿ ಇಂದು ಸಭೆ ನಡೆಯಿತು.
ಸುಳ್ಯ ನಗರವನ್ನು ಸಂಪರ್ಕಿಸುವ ಎಲ್ಲಾ ಒಳರಸ್ತೆಗಳನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನ.ಪಂ ಸದಸ್ಯ ಎಂ.ವೆಂಕಪ್ಪ ಗೌಡ ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಡೇವಿಡ್ ಕ್ರಾಸ್ತಾ ಹಾಗು ಇತರ ಸದಸ್ಯರು ದನಿಗೂಡಿಸಿದರು. ಮಾತ್ರವಲ್ಲದೇ ಅಂಗಡಿಗಳ ಎದುರು ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುವಲ್ಲಿಯೂ ಪೊಲೀಸರ ಸಹಕಾರ ಅಗತ್ಯವಿದೆ ಎಂದು ವಿನಯಕುಮಾರ್ ಕಂದಡ್ಕ ಮತ್ತು ಎಂ.ವೆಂಕಪ್ಪ ಗೌಡ ಹೇಳಿದರು.
ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ ಎಸ್.ಐ ಹರೀಶ್ ಅವರು, ಮೇಲಾಧಿಕಾರಿಗಳ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಕೃಷಿಕರಿಗೆ, ಆಸ್ಪತ್ರೆಗಳಿಗೆ ಬರುವವರಿಗೆ ಯಾವುದೇ ತೊಂದರೆಯಾಗಿಲ್ಲ. ಉಳಿದವರು ನಗರದ ಒಳಗೆ ನಡೆದೇ ಬರಬೇಕಾಗುತ್ತದೆ. ಲಾಕ್ ಡೌನ್ ಸಂದರ್ಭದಲ್ಲಿ ಸ್ವಲ್ಪ ತೊಂದರೆಯಾಗುವುದು ಅನಿವಾರ್ಯ ಎಂದರಲ್ಲದೆ ತಮಗಿರುವ ಸೀಮಿತ ಸಿಬ್ಬಂದಿವರ್ಗದವರನ್ನು ಜೊತೆಗೂಡಿಸಿಕೊಂಡು ಕೆಲಸ ನಿರ್ವಹಿಸುತ್ತಿರುವುದಾಗಿ ಮಾಹಿತಿ ನೀಡಿದರು.
ಇನ್ನು ಲಾಕ್ ಡೌನ್ ಸಮಯದಲ್ಲಿ ವಿತರಿಸುವ ಆಹಾರ ಸಾಮಾಗ್ರಿ ಕಿಟ್ ಬಗ್ಗೆ ಪ್ರಸ್ತಾಪಿಸಿದ ಎಂ.ವೆಂಕಪ್ಪ ಗೌಡರು, ಅಸಂಘಟಿತ ಕಾರ್ಮಿಕರಿಗೆ ಈಗ ಅಷ್ಟೊಂದು ತೊಂದರೆ ಇಲ್ಲ, ಹಾಗೂ APL ಕಾರ್ಡಿನವರಿಗೂ ಅಕ್ಕಿ ವಿತರಣೆಯಾಗಬೇಕು. ಆಹಾರ ಸಾಮಾಗ್ರಿ ಕಿಟ್ ಬಗ್ಗೆ ಪಂಚಾಯತ್ ಕಡೆಯಿಂದ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದರು. ರೇಷನ್ ಕಾರ್ಡ್ ಇಲ್ಲದವರಿಗೂ ಅಕ್ಕಿ,ಜೀನಸು ಸಾಮಾಗ್ರಿ ವ್ಯವಸ್ಥೆ ಆಗಬೇಕು ಎಂದು ಸದಸ್ಯ ಷರೀಫ್ ಖಂಠಿ ಹೇಳಿದರು. ರೇಷನ್ ಕಾರ್ಡ್ ನ ಬೆರಳಚ್ಚು ಪತ್ತೆ ಸಮಸ್ಯೆ ಇರುವವರಿಗೂ ಅಕ್ಕಿ ವಿತರಣೆಯ ವ್ಯವಸ್ಥೆ ಆಗಬೇಕು ಎಂದು ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಹೇಳಿದರು.
ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಅವರು, ಮುಖ್ಯವಾಗಿ ನ.ಪಂ ನ ಯಾವುದೇ ವಾರ್ಡಿನಲ್ಲಿ ನೀರಿನ ಸಮಸ್ಯೆಯಾಗಬಾರದು. ಸದಸ್ಯರು ಕಿಟ್ ಗಳನ್ನೂ ಮಾಡಿ ಹಂಚುವಲ್ಲಿ ಅಧಿಕಾರಿಗಳು ಸಹಕಾರ ನೀಡಬೇಕು ಎಂದರಲ್ಲದೇ ಎರಡು ಮೂರು ದಿನಕ್ಕೊಮ್ಮೆ ಸಭೆ ನಡೆಸಿ ಸದಸ್ಯರ ಅಭಿಪ್ರಾಯಗಳ ಹಾಗೂ ಯೋಜನೆಗಳ ಅನುಷ್ಠಾನದ ಬಗ್ಗೆ ನಿಗಾ ವಹಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ತಹಶೀಲ್ದಾರ್ ಅನಂತಶಂಕರ್, ನ.ಪಂ ಮುಖ್ಯಾಧಿಕಾರಿ ಮತ್ತಡಿ, ಅಧಿಕಾರಿ ವರ್ಗ, ನ.ಪಂ ಸದಸ್ಯರು ಉಪಸ್ಥಿತರಿದ್ದರು.