ಅರೆಭಾಷೆಯ ಸಂಸ್ಕೃತಿ, ಪರಂಪರೆಯ ಉಳಿವಿಗೆ ಹಬ್ಬಗಳ ಆಚರಣೆ ಮುಖ್ಯ- ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌…

ಕೊಡಗು : ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು.ಅರೆಭಾಷೆಯ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಹಬ್ಬಗಳ ಆಚರಣೆ ಅತಿ ಮುಖ್ಯ ಎಂದು ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌ ಹೇಳಿದ್ದಾರೆ.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಶ್ರೀ ಭಗವಾನ್‌ ಸಂಘ ಊರುಬೈಲು, ಸ್ವಾಮಿ ವಿವೇಕಾನಂದ ಯುವಕ ಮಂಡಲ ಇವರ ಸಹಯೋಗದಲ್ಲಿ ಚೆಂಬು ಗ್ರಾಮದ ಕೂಡಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅರೆಭಾಷೆ ಸಿರಿ ಸಂಸ್ಕೃತಿ ಮತ್ತು ಕೆಡ್ಡಾಸ ಗೌಜಿ ಸಾಂಸ್ಕೃತಿಕ ಜಂಬರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಅಂತೆಯೇ ನಮ್ಮ ರಾಜ್ಯವೂ ಸಹ ವಿವಿಧ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡಿದೆ. ಅವುಗಳಲ್ಲಿ ಅರೆಭಾಷೆ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ಕೆಡ್ಡಸ ಹಬ್ಬ ಬಹಳಷ್ಟು ವೈವಿಧ್ಯತೆಯನ್ನು ಒಳಗೊಂಡಿದೆ ಎಂದರು.
ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್‌ ಅವರು ಮಾತನಾಡಿ, ಅರೆಭಾಷೆ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಅವರು ಹೇಳಿದರು
ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅರೆಭಾಷೆ ಸಾಂಸ್ಕೃತಿಕ ಪರಂಪರೆಯ ಬಗ್ಗೆಯೂ ತಿಳಿಸಬೇಕು. ಅರೆಭಾಷೆ ಜನಾಂಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ ಬದುಕು ಆಧುನಿಕತೆಗೆ ಹೊಂದಿಕೊಳ್ಳುತ್ತಿದ್ದಂತೆ ಅರೆಭಾಷೆ ಮಾತನಾಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಅರೆಭಾಷೆಯ ಬಗ್ಗೆ ಹಲವರಲ್ಲಿರುವ ಕೀಳರಿಮೆ ಇದಕ್ಕೆ ಕಾರಣ. ಅರೆಭಾಷೆ ಸಂಸ್ಕೃತಿಗೆ ಸುಧೀರ್ಘ‌ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿದೆ. ಇವೆಲ್ಲವನ್ನು ಅರಿತು, ಅರೆಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯರಾದ ನಾಗೇಶ್‌ ಕುಂದಲ್ಪಾಡಿ ಅವರು ಮಾತನಾಡಿ, ಕೆಡ್ಡಸ ಗೌಜಿ ಮಣ್ಣಿನೊಂದಿಗೆ ಬೆಳೆದು ಬಂದ ಹಬ್ಬವಾಗಿದೆ. ಕಾಲ ಬದಲಾದಂತೆ ಹಬ್ಬ ಆಚರಣೆಯೂ ಕಡಿಮೆಯಾಗಿದೆ. ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡ ಮತ್ತು ಕೆ.ಜಿ ಬೋಪಯ್ಯ ಅವರ ಶ್ರಮದಿಂದ ಇಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪಿತವಾಗಿದೆ. ಮುಂದೆಯೂ ಅರೆಭಾಷೆ ಸಂಸ್ಕೃತಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದರು.
ಕೆ.ವಿ.ಜಿ ಇಂಜಿನೀರಿಂಗ್ ಕಾಲೇಜಿನ ಪ್ರಾಂಶುಪಾಲ, ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷ ಡಾ. ಎನ್‌.ಎ ಜ್ಞಾನೇಶ್‌ ಅವರು ಮಾತನಾಡಿ, ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ. ಯುವ ಜನಾಂಗ ಈ ಅರೆಭಾಷೆಯನ್ನು ಬೆಳೆಸುವ ಕಾರ್ಯದತ್ತ ಮುಖ ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಚೆಂಬು ಗ್ರಾಮಪಂಚಾಯಿತಿ ಅಧ್ಯಕ್ಷರಾದ ದಿನೇಶ್‌ ಊರುಬೈಲು, ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎನ್‌.ಸಿ ಅನಂತ, ನಿವೃತ್ತ ಪ್ರಾಂಶುಪಾಲರು ಮತ್ತು ಲೇಖಕರಾದ ಕುಯಿಂತೋಡು ದಾಮೋದರ, ಚೆಂಬುವಿನ ಸ್ವಾಮಿ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷರಾದ ದಿನೇಶ್‌ ಪೂಜಾರಿ ಗದ್ದೆ, ಕೂಡಡ್ಕ ಸ.ಹಿ.ಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜೀವನ್‌ ಪೆರಿಗೇರಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ ಸೇರಿದಂತೆ ಇತರರು ಇದ್ದರು.
ಸಂಯೋಜಕ ‌ ಲೋಕೇಶ್‌ ಊರುಬೈಲು ಪ್ರಸ್ತಾವನೆಗೈದರು.ದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಸದಸ್ಯರಾದ ಸ್ಮಿತಾ ಅಮೃತರಾಜ್‌ ಸ್ವಾಗತಿಸಿದರು, ರಮೇಶ ನಂಬಿಯಾರ್‌ ನಿರೂಪಿಸಿದರು. ರವಿಕುಮಾರ್‌ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button