ದ.ಕ – ಜಿಲ್ಲೆಯಲ್ಲಿ ಮತ್ತೆ ಇಬ್ಬರಲ್ಲಿ ಕೊರೊನ ಸೋಂಕು ದೃಢ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಶನಿವಾರ) ಎರಡು ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ 34 ವರ್ಷದ ಮಹಿಳೆಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಈಕೆಗೆ ಉಸಿರಾಟದ ಸಮಸ್ಯೆ ಇದ್ದು, ಗ್ರಾಮಸ್ಥರ ಒತ್ತಾಯದ ಕಾರಣದಿಂದ ಈಕೆ ಕೋವಿಡ್-19 ಪರೀಕ್ಷೆ ನಡೆಸಿದ್ದರು ಎನ್ನಲಾಗಿದೆ. ಈಕೆಗೆ ಸೋಂಕು ದೃಢಪಟ್ಟ ಕಾರಣ ಮಹಿಳೆಯನ್ನು ಇಂದು ಬೆಳಗ್ಗೆ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಿರ್ಲಾಲು ಗ್ರಾಮದಲ್ಲಿ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಮುಂಬೈನಿಂದ ಆಗಮಿಸಿದ ಮತ್ತೋರ್ವನಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದ್ದ 30 ವರ್ಷದ ಯುವಕನಿಗೆ ಕೋವಿಡ್19 ಪಾಸಿಟಿವ್ ವರದಿ ಬಂದಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಶುಕ್ರವಾರ ಸಂಜೆಯ ಬಳಿಕ ಇದುವರೆಗೆ 196 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.ರಾಜ್ಯದ ಯಾದಗಿರಿಯಲ್ಲಿ 72 ಸೋಂಕು ಪ್ರಕರಣಗಳು, ರಾಯಚೂರಿನಲ್ಲಿ 39 ಸೋಂಕು ಪ್ರಕರಣಗಳು ಖಚಿತವಾಗಿದೆ. ಈ ಎಲ್ಲಾ ಸೋಂಕಿತರು ಮಹಾರಾಷ್ಟ್ರದ ಮುಂಬೈನಿಂದ ಬಂದವರಾಗಿದ್ದಾರೆ. ಮಂಡ್ಯದಲ್ಲಿ 28 ಪ್ರಕರಣಗಳು, ಚಿಕ್ಕಬಳ್ಳಾಪುರದಲ್ಲಿ 20 ಸೋಂಕು ಪ್ರಕರಣಗಳು, ಗದಗದಲ್ಲಿ 15 ಸೋಂಕು ಪ್ರಕರಣಗಳು ದೃಢವಾಗಿದೆ. ಹಾಸನ, ಬೆಂಗಳೂರು ನಗರದಲ್ಲಿ ತಲಾ ನಾಲ್ಕು, ದಾವಣಗೆರೆಯಲ್ಲಿ ಮೂರು, ಕೋಲಾರ, ಉತ್ತರ ಕನ್ನಡದಲ್ಲಿ ತಲಾ ಎರಡು, ಧಾರವಾಡ, ಕೋಲಾರ ಮತ್ತು ಉಡುಪಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.