ಕಲ್ಲಡ್ಕದಲ್ಲಿ ಕ್ರೀಡೋತ್ಸವ 2024 ವೀಕ್ಷಿಸಿದ ಆರೆಸ್ಸೆಸ್ ಪರಮೋಚ್ಚ ನಾಯಕ ಮೋಹನ್ ಭಾಗವತ್…

ವರದಿ: ಜಯಾನಂದ ಪೆರಾಜೆ
ಬಂಟ್ವಾಳ:ವಿದ್ಯೆಯಿಂದ ಗುಣವಂತರಾಗಬೇಕು.ಚತುರರಾಗಬೇಕು. ಶಕ್ತಿವಂತರಾಗಬೇಕು. ಶಕ್ತಿಯಿಂದ ದುರ್ಬಲರ ರಕ್ಷಣೆ ಮಾಡಬೇಕು ಎಂದು ಆರೆಸ್ಸೆಸ್ ರಾಷ್ಟ್ರೀಯ ನಾಯಕ ಮೋಹನ್ ಜೀ ಭಾಗವತ್ ಕಲ್ಲಡ್ಕ ಕ್ರೀಡೋತ್ಸವದಲ್ಲಿ ಭಾಗವಹಿಸಿ ಹೇಳಿದರು.
ಕಲಿತು ಪಂಡಿತನಾದರೆ ಸಾಲದು. ಸಕಲ ಜೀವಿಗಳನ್ನು ಪ್ರೀತಿಸಬೇಕು. ವಿವೇಚನೆಯಿಲ್ಲದ ವಿದ್ಯೆಯಿಂದ ವಿನಾಶ ತಪ್ಪಿದ್ದಲ್ಲ ಎಂದು ಪಂಚತಂತ್ರದ‌ ಮೂವರು ಸಿದ್ಧರ ಕತೆಯನ್ನು ಉದಾಹರಿಸಿ ಅವರುಮಾತನಾಡಿದರು.ವಿಶ್ವ ಕುಟುಂಬದ ಸಾಕಾರ,ಸರ್ವರೂ ಸುಖಿಗಳಾಗಬೇಕೆಂಬ ಪರಿಕಲ್ಪನೆ ಭಾರತೀಯ ಶಿಕ್ಷಣ ಪರಂಪರೆಯಿಂದ ಬೆಳೆದು ಬಂದಿದೆ. ಕಲಿತ ವಿದ್ಯೆ ಇತರರಿಗೂ ಜ್ಞಾನ ನೀಡುವಂತಾಗಬೇಕು. ಧನ ಸಂಪಾದನೆಯಿಂದ ದಾನ ಮಾಡಬೇಕು. ಸಮಾಜದಿಂದ, ಪ್ರಕೃತಿಯಿಂದ ಪಡೆದುದನ್ನು ಮತ್ತೆ ಸಮಾಜಕ್ಕೆ,ದೇಶಕ್ಕೆ ಹಿಂದಿರುಗಿಸಬೇಕು ಎಂದವರು ಹೇಳಿದರು.
ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಒಳ್ಳೆಯ ಮನುಷ್ಯರನ್ನು, ಸರ್ವಾಂಗಿಣ ಬೆಳವಣಿಗೆಯ ವ್ಯಕಿತ್ವ ವಿಕಾಸ ಶಿಕ್ಷಣವನ್ನು ದೇಶದಲ್ಲಿ ಹೊಸ‌ಶಿಕ್ಷಣ ನೀತಿ ಜಾರಿಯಾಗುವ ಮುನ್ನವೇ ವಿದ್ಯಾಕೇಂದ್ರದಲ್ಲಿ ನೀಡಲಾಗುತ್ತಿದೆ. ಶಿಕ್ಷಣ ಸ್ವಾರ್ಥಕ್ಕೆ ಅಲ್ಲ.ಸಮಾಜದ ಒಳಿತಿಗೆ ಉಪಯೋಗವಾಗಲಿ‌ ಎಂದು ಅವರು ಹೇಳಿದರು.
ಆರಂಭದಲ್ಲಿ ಶಿಶು ಮಂದಿರ, ಗುರುಕುಲ ಮಾದರಿಯ ಪ್ರಾಥಮಿಕ ಶಾಲಾ ಶಿಕ್ಷಣದ ಪ್ರತ್ಯಕ್ಷ ಮಾದರಿಯನ್ನು ತರಗತಿಗೆ ಹೋಗಿ ವೀಕ್ಷಿಸಿದರು. ಬಳಿಕ ವಿಶೇಷವಾಗಿ ಝಡ್ ಪ್ಲಸ್ ಭದ್ರತೆಯೊಂದಿಗೆ ವೀಕ್ಷಣ ವೇದಿಕೆಗೆ ಆಗಮಿಸಿ, ಶ್ರೀರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿದರು. 3318 ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ ವೈವಿಧ್ಯಮಯ , ವರ್ಣರಂಜಿತ ರೋಮಾಂಚಕಾರಿ ಸಾಹಸ ಪ್ರದರ್ಶನಗಳನ್ನು ವೀಕ್ಷಿಸಿದ ಬಳಿಕ ಭಾಷಣದ ಅಗತ್ಯವೇ ಇಲ್ಲ ಎಂದ ಅವರು ಒಂದೆರಡು ಕತೆಗಳ ಮೂಲಕ ಜ್ಞಾನದ ಮಹತ್ವ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಆರೆಸ್ಸೆಸ್ ಪ್ರಮುಖರ ಉಪಸ್ಥಿತಿ:
ಮುಕುಂದ ಸಿ.ಆರ್. ಸಹಕಾರ್ಯವಾಹರು, ಡಾ.ವಾಮನ ಶೆಣೈ ದಕ್ಷಿಣ ಕ್ಷೇತ್ರೀಯ ಸಂಘಚಾಲಕರು, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸುಧೀರ್, ಭರತ್, ಕೈಲಾಸ್, ಗುರುಪ್ರಸಾದ, ನಂದೀಶ್, ಜಯಪ್ರಕಾಶ್, ನಾರಾಯಣ ಶೆಣೈ, ಪಟ್ಟಾಭಿರಾಮ, ಎಂ.ಬಿ.ಪುರಾಣಿಕ್, ಡಾ.ಸತೀಶ್ ಮೊದಲಾದವರು ಉಪಸ್ಥಿತರಿದ್ದರು. ಆರೆಸ್ಸೆಸ್ ಪ್ರಮುಖರು ಉಪಸ್ಥಿತರಿದ್ದರು.

ಉದ್ಯಮಿಗಳಾದ‌ ಅಜಿತ್ ಕುಮಾರ್ ಜೈನ್ ಮುಂಬಯಿ, ಮನೋಜ್ ಕುಮಾರ್ ಮುಂಬೈ,ಪ್ರಕಾಶ ಶೆಟ್ಟಿ ಬಂಜಾರ ಬೆಂಗಳೂರು ಮೊದಲಾದ ರಾಷ್ಟ್ರ, ರಾಜ್ಯದ ಉದ್ಯಮಿಗಳು ಇದ್ದರು.
ಸಂಸದ ಬೃಜೇಶ್ ಚೌಟ,ಶಾಸಕ ರಾಜೇಶ್ ನಾಯಕ್,ಜಿಲ್ಲೆಯ ಶಾಸಕರಾದ ಉಮಾನಾಥ ಕೋಟ್ಯಾನ್, ಸುನಿಲ್ ಕುಮಾರ್‌, ಸುರೇಶ ಶೆಟ್ಟಿ ಗುರ್ಮೆ,ಗುರುಪ್ರಸಾದ್ ಗಂಟಿಹೊಳೆ, ಡಾ.ಭರತ್ ಶೆಟ್ಟಿ,ವೇದವ್ಯಾಸ ಕಾಮತ್,ಕಿರಣ್ ಕುಮಾರ್ ಕೊಡ್ಗಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಪದ್ಮನಾಭಕೊಟ್ಟಾರಿ, ರುಕ್ಮಯ ಪೂಜಾರಿ, ರಘುಪತಿ ಭಟ್,ಕೃಷ್ಣ ಪಾಲೆಮಾರ್, ರಂಗಮೂರ್ತಿ,ಸತೀಶ್ ಕುಂಪಲ ಮೊದಲಾದ ಹಲವು ಗಣ್ಯರು ಉಪಸ್ಥಿತರಿದ್ದರು.
ವರ್ಣರಂಜಿತ ಕ್ರೀಡೋತ್ಸವ 2024ನ್ನು ಆರಂಭದಲ್ಲಿ ಸರಸಂಘಚಾಲಕ ಮಾನನೀಯ ಮೋಹನ್ ಜೀ ಭಾಗವತ್ ಶ್ರೀರಾಮನ ಮೂರ್ತಿಗೆ ಅಭಿಷೇಕ ಮಾಡುವ ಮೂಲಕ ಚಾಲನೆ ನೀಡಿದರು. ಸಂಚಾಲಕ ವಸಂತ ಮಾಧವ ಸ್ವಾಗತಿಸಿದರು. ವಿದ್ಯಾಕೇಂದ್ರದ ಸಂಸ್ಥಾಪಕ ಡಾ.ಪ್ರಭಾಕರ ಭಟ್ ಸಂಸ್ಥೆ ರಾ.ಸ್ವ. ಸಂಘದ ಹಿನ್ನೆಲೆಯಲ್ಲಿ ಸ್ಥಾಪನೆಯಾಗಿದ್ದು ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ಸರಸಂಘಚಾಲಕರು‌ ಆಗಮಿಸಿರುವುದು ವಿದ್ಯಾಕೇಂದ್ರದ ಸೌಭಾಗ್ಯ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಧಾಕೃಷ್ಣ ಶ್ರೀನಿಲಯ, ಜಿನ್ನಪ್ಪ ಏಳ್ತಿಮಾರ್ ನಿರೂಪಿಸಿದರು. ಪ್ರಾಚಾರ್ಯ ಕೃಷ್ಣಕುಮಾರ್ ಕಾಯರ್ಕಟ್ಟೆ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದರು. ಸಹಸ್ರಾರು ಪ್ರೇಕ್ಷಕರು ಭಾಗವಹಿಸಿ ಮಕ್ಕಳ ಸಾಹಸ ಪ್ರದರ್ಶನ ನೋಡಿ ಸಂಭ್ರಮಿಸಿದರು. ಆರೆಸ್ಸೆಸ್ ಶತಮಾನ ವರ್ಷದಲ್ಲಿ ದ.ಕ.ಜಿಲ್ಲೆಯ ಕಲ್ಲಡ್ಕಕ್ಕೆ‌ ಸರಸಂಘಚಾಲಕರು ಆಗಮಿಸಿರುವುದು ಸ್ವಯಂಸೇವಕರಿಗೆ ಧನ್ಯತೆಯ ಕ್ಷಣವಾಯಿತು.
ಸಾಹಸಮಯ,ರೋಮಂಚನಕಾರಿ ಶಾರೀಕ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನೋಡುಗರ ಮನಸೂರೆಗೊಂಡಿತು
ಸಮವಸ್ತ್ರಧಾರಿ ವಿದ್ಯಾರ್ಥಿಗಳ ಪಥಸಂಚಲನದೊಂದಿಗೆ ಆರಂಭಗೊಂಡ ವಿವಿಧ ಪ್ರದರ್ಶನಗಳು ಪ್ರೇಕ್ಷಕರು ಎರಡು ಗಂಟೆಗಳ ಕಾಲ ನಿರಂತರ ಪ್ರದರ್ಶನವನ್ನು ಚಲನಚಿತ್ರವನ್ನು ನೊಡುವಂತೆ ಎವೆಯಿಕ್ಕದೆ ನೋಡಿದರು.
ಕೋವಿಯೊಂದಿಗೆ ಸರಸ, ಮಲ್ಲಕಂಬಕ್ಕೆ ಏರಿ ತೂಗಾಡುವ ಮಲ್ಲರು, ತಿರುಗುವ ಮಲ್ಲಕಂಬದಲ್ಲಿ‌ಯೋಗಾಸನ ವೈವಿಧ್ಯ, ದ್ವಂದ್ವ ಕಾಳಗದಲ್ಲಿ ಮಿಂಚಿನ ಒದೆತ, ಕತ್ತಿವರೆಸೆಯ ಕೈಚಳಕ, ಉರಿಯುವ ಬೆಂಕಿ ಚಕ್ರದೊಳಗೆ ಜಿಗಿತ, ಕಾಲ್ಚಕ್ರದಲ್ಲಿ ಕರಾಮತ್ತು, ಹೀಗೆ ಒಂದಕ್ಕೊಂದು ಮೀರಿಸುವ ಕಸರತ್ತುಗಳು.
ಅಯೋಧ್ಯೆಯ ಶ್ರೀರಾಮನ ಬೃಹತ್ ಭಾವಚಿತ್ರ ಸಭಾಂಗಣಕ್ಕೆ ಆಗಮಿಸಿದಾಗ ಎಲ್ಲರೂ ಭಕ್ತಿಪರವಶರಾಗಿ‌ ಜೈಶ್ರೀರಾಮ್ ಘೋಷಣೆ ಕೂಗಿದರು. ಶಿಶು ಮಂದಿರದ 200 ಕ್ಕೂ ಮಿಕ್ಕಿದ ಪುಟಾಣಿಗಳ ಕುಣಿತ, ನೂರಾರು ಬಾಲಕಿಯರ ಕೋಲಾಟದೊಂದಿಗೆ ಜಡೆಹೆಣೆಯುವ ಕೈಚಳಕ ರಮಣೀಯವಾಗಿತ್ತು. ಸಾಮೂಹಿಕ ನೃತ್ಯ, ಭಜನೆ ವಿಶೇಷ ಆಕರ್ಷಣೆಯಾಗಿ ಮೂಡಿ ಬಂತು. ಶತಕದಷ್ಟು ಚೆಂಡೆವಾದಕರ ಚೆಂಡೆವಾದನದ ವೈಖರಿ, ಕಾಲೇಜು ವಿದ್ಯಾರ್ಥಿನಿಯರ ಸುಗ್ಗಿ ಕುಣಿತದ ಸೋಬಗು ಕಳೆದು ಹೋಗುತ್ತಿರುವ ಕೃಷಿ ಸಂಸ್ಕೃತಿಯನ್ನು ನೆನಪಿಸುವಂತಿತ್ತು.

whatsapp image 2024 12 09 at 12.19.07 pm (1)

whatsapp image 2024 12 09 at 12.19.08 pm

whatsapp image 2024 12 09 at 12.19.08 pm (1)

whatsapp image 2024 12 09 at 12.20.26 pm

whatsapp image 2024 12 09 at 9.57.22 pm

whatsapp image 2024 12 09 at 12.19.07 pm

Sponsors

Related Articles

Back to top button