ಟಿ.ಎಂ. ಶಹೀದ್ ತೆಕ್ಕಿಲ್ ರವರಿಗೆ ನೂರುಲ್ ಹುದಾ ಅಕಾಡೆಮಿಯ ಗೌರವಾರ್ಪಣೆ…
ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಟ ಗುರುತು ಮೂಡಿಸಿದ ವ್ಯಕ್ತಿತ್ವಕ್ಕೆ ಸನ್ಮಾನ...

ಮಾಡನ್ನೂರ್: ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಮಿತಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ ಟಿ.ಎಂ. ಶಹೀದ್ ತೆಕ್ಕಿಲ್ ರವರಿಗೆ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮವು ನೆರವೇರಿತು.
ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ಸೇವೆ ಮತ್ತು ದೃಢವಾದ ನಾಯಕತ್ವದ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟಿ.ಎಂ. ಶಹೀದ್ ತೆಕ್ಕಿಲ್ ಅವರು, ಜನಸೇವೆಯ ನಿಷ್ಠೆ, ಶಿಕ್ಷಣಾಭಿವೃದ್ಧಿಯ ಆಸಕ್ತಿ ಮತ್ತು ಸಮಾಜಮುಖಿ ಚಿಂತನೆಗಳ ಮೂಲಕ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ, ಉಪ ಪ್ರಾಂಶುಪಾಲರಾದ ಸೈಯ್ಯಿದ್ ಬರ್ಹಾನ್ ಅಲಿ ತಂಗಳ್, ಕರ್ನಾಟಕ ರಾಜ್ಯ ಎಸ್.ಕೆ.ಎಸ್.ಎಸ್.ಎಫ್ ಯುಎಇ ನ್ಯಾಷನಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ನಈಮಿ, ಸಂಸ್ಥೆಯ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ನೆಕ್ಕರೆ, ಹಸೈನಾರ್ ಸಿ.ಕೆ., ಬಿ.ಎಂ. ಖಾಲಿದ್, ಅಬ್ದುಲ್ಲಾ ಬಿ.ಕೆ., ಪಿ.ಟಿ.ಎ ಕಮಿಟಿ ಅಧ್ಯಕ್ಷರಾದ ಅಲಿ ಮುಸ್ಲಿಯಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಕ್ತಾರರು, “ಟಿ.ಎಂ. ಶಹೀದ್ ತೆಕ್ಕಿಲ್ ಅವರ ಸಾಮಾಜಿಕ ಬದ್ಧತೆ ಮತ್ತು ಶಿಕ್ಷಣ ಕ್ಷೇತ್ರದತ್ತ ದೃಷ್ಟಿಕೋನವು ಹೊಸ ಪೀಳಿಗೆಯವರಿಗೆ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿದ ಟಿ.ಎಂ. ಶಹೀದ್ ತೆಕ್ಕಿಲ್ ಅವರು ನೂರುಲ್ ಹುದಾ ಸಂಸ್ಥೆಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.