ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ…

ಪುತ್ತೂರು: ನಿಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಹೆಚ್ಚು ವೇತನವನ್ನು ಪಡೆಯುವ ಕೆಲಸದ ಹಿಂದೆ ಓಡುವ ಬದಲಿಗೆ ಹೆಚ್ಚಿನ ಜ್ಞಾನ ಮತ್ತು ಅನುಭವವನ್ನು ಪಡೆಯುವತ್ತ ಗಮನಹರಿಸಬೇಕು ಎಂದು ಬೋಸ್ ಪ್ರೊಫೆಶನಲ್ ಆರ್ ಎಂಡ್ ಡಿ ಸೆಂಟರ್ ಮಂಗಳೂರು ಇದರ ಡೈರೆಕ್ಟರ್ ಆಫ್ ಸಾಫ್ಟ್ ವೇರ್ ಇಂಜಿನಿಯರಿಂಗ್ ಹಾಗೂ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿ ನಮಿತ್ ಪದ್ಮರಾಜ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಇಂಜಿನಿಯರಿಂಗ್, ಎಂಬಿಎ ಮತ್ತು ಎಂಸಿಎ ವಿಭಾಗದ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ತಾನು ಹೀಗೆಯೇ ಇರುವುದು ಇಷ್ಟೇ ಕೆಲಸ ಮಾಡುವುದು ಎನ್ನುವ ಆರಾಮ ವಲಯದಿಂದ ಹೊರಬರದೇ ಹೋದರೆ ಜೀವನದಲ್ಲಿ ಸವಾಲುಗಳನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ. ಅವಕಾಶಗಳು ಸಿಕ್ಕಿದಾಗ ಅದರ ಒಳಿತು ಕೆಡುಕುಗಳನ್ನು ನಿರ್ಧರಿಸಿ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಜಾಣ್ಮೆಯನ್ನು ಹೊಂದಬೇಕು ಎಂದರು. 2008ರ ಆರ್ಥಿಕ ಹಿಂಜರಿತದ ಕಾಲದ ತಮ್ಮ ಅನುಭವವನ್ನು ಹಂಚಿಕೊಂಡ ಅವರು ಪ್ರಾರಂಭದ ದಿನಗಳಲ್ಲಿ ತಾನು ಕೆಲಸ ಮಾಡಿದ ಸಣ್ಣ ಕಂಪೆನಿಯೊಂದರಲ್ಲಿ ದೊರೆತ ಅನುಭವವು ತನ್ನನ್ನು ಇಷ್ಟು ಎತ್ತರಕ್ಕೇರಿಸಿದೆ ಎಂದರು. ಕನ್ನಡ ಮಾಧ್ಯಮದಲ್ಲಿ ಕಲಿತ ತಾನು ಈ ಮಟ್ಟಕ್ಕೆ ಬೆಳೆಯಲು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕೊಡುಗೆ ಅಮೂಲ್ಯವಾದದ್ದು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ಮಾತನಾಡಿ ನಮ್ಮ ಸುಖ ಮತ್ತು ದುಃಖಗಳಿಗೆ ಬೇರೆಯವರು ಕಾರಣರಲ್ಲ. ಬೇರೆಯವರು ಸುಖ ಅಥವಾ ದುಃಖ ಕೊಡ್ತಾರೆ ಅನ್ನುವುದು ಮೂರ್ಖತನ ಇದನ್ನು ಅರಿತು ನಮ್ಮ ಜೀವನವನ್ನು ನಾವೇ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಅಲ್ಲದೆ ತಂದೆ, ತಾಯಿ, ಕಲಿಸಿದ ಗುರು ಮತ್ತು ಕಲಿತ ಸಂಸ್ಥೆಗೆ ಗೌರವವನ್ನು ಕೊಡಿ ಅದು ಅನವರತವೂ ನಿಮ್ಮನ್ನು ಕಾಪಾಡುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಕಾಲೇಜಿನಲ್ಲಿ ಪದವಿಯನ್ನೋ ಸ್ನಾತಕೋತ್ತರ ಪದವಿಯನ್ನೋ ಪಡೆದು ಹೊರ ಹೋಗುವವರಿದ್ದೀರಿ ಆದರೆ ಮುಂದೆ ಇರುವುದು ವಿಶಾಲವಾದ ಜಗತ್ತು, ವಿವಿದ ಬಗೆಯ ಜನ ಮಾನಸ, ದಿನಕ್ಕೊಂದು ತರಹದ ಸಮಸ್ಯೆಗಳು ಇವೆಲ್ಲವನ್ನು ಎದುರಿಸುವುದಕ್ಕೆ ಆತ್ಮವಿಶ್ವಾಸ, ನಾಯಕತ್ವ ಗುಣ ನಿಮ್ಮಲ್ಲಿ ಅಬಿವೃದ್ದಿಯಾಗಬೇಕು ಎಂದರು. ನೀವೊಬ್ಬ ಪರಿಪೂರ್ಣ ಇಂಜಿನಿಯರ್ ಆಗಿ ಹೊರಹೊಮ್ಮುವುದಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕಾಲೇಜು ಒದಗಿಸಿಕೊಟ್ಟಿದೆ. ನಿಮ್ಮ ಮುಂದಿನ ಜೀವನವು ವಿದ್ಯಾರ್ಥಿ ಜೀವನದಂತೆ ಇರುವುದಿಲ್ಲ. ಕಾರ್ಪೊರೇಟ್ ಜಗತ್ತಿನ ಒತ್ತಡವನ್ನು ತಾಳಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಂಡು ಸುಂದರವಾದ ಜೀವನವನ್ನು ಅನುಭವಿಸಿ ಎಂದರು.
ಕಾಲೇಜಿನಿಂದ ಬೀಳ್ಕೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ನೇಮಕಾತಿ ಮತ್ತು ತರಬೇತಿ ವಿಭಾಗದ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ, ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ, ವಿಭಾಗ ಮುಖ್ಯಸ್ಥರಾದ ಡಾ.ಮನುಜೇಶ್.ಬಿ.ಜೆ, ಡಾ.ಶ್ರೀಕಾಂತ್ ರಾವ್ ಎಸ್.ಕೆ, ಪ್ರೊ.ಪ್ರಶಾಂತ, ಪ್ರೊ.ರೂಪ.ಜಿ.ಕೆ, ಪ್ರೊ.ಪ್ರದೀಪ್ ಕುಮಾರ್.ಕೆ.ಜಿ, ಪ್ರೊ.ಅಭಿಷೇಕ್ ಕುಮಾರ್.ಕೆ ಮತ್ತು ಮುಖ್ಯ ಗ್ರಂಥಪಾಲಕ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ದೀಪಶ್ರೀ.ಕೆ, ಸನ್ಮಯ.ಐ.ಕೆ ಮತ್ತು ಶ್ರೀತಿಕ ಪ್ರಾರ್ಥಿಸಿದರು, ಅನೂಶಾ ರೈ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮ ಸಂಯೋಜಕರಾದ ಡಾ.ಮನುಜೇಶ್.ಬಿ.ಜೆ ಸ್ವಾಗತಿಸಿ, ಪ್ರೊ.ಅಭಿಷೇಕ್ ಕುಮಾರ್.ಕೆ ವಂದಿಸಿದರು. ತಾಶ್ವಿ ರೈ.ಕೆ ಮತ್ತು ಎಂ.ಸ್ಕಂದ ಶ್ಯಾಮ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

whatsapp image 2026 05 20 at 3.06.11 pm (1)

whatsapp image 2026 05 20 at 3.06.12 pm

whatsapp image 2026 05 20 at 3.06.12 pm (1)

Related Articles