ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಸ್ಟಾರ್ಟ್‍ಅಪ್ ಸಂಸ್ಥೆ ಡಿಜಿಕಾಂಪ್ ಟೆಕ್ನಾಲಜೀಸ್ ಉದ್ಘಾಟನೆ…

ಪುತ್ತೂರು: ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಜಗತ್ತಿನ ವಾತಾವರಣವನ್ನು ನಿರ್ಮಿಸಿ ಅವರಿಗೆ ಅದರ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ಕಾಲೇಜಿನಲ್ಲಿ ಸ್ಟಾರ್ಟ್‍ಅಪ್‍ಗಳ ಸ್ಥಾಪನೆಗೆ ಅವಕಾಶವನ್ನು ನೀಡಲಾಗುತ್ತಿದೆ, ಇಂದು 3ನೇ ಕಂಪೆನಿಯ ಉದ್ಘಾಟನೆಯಾಗಿದೆ ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಕಂಪೆನಿಗೆ ಪೂರ್ಣ ಪ್ರಯೋಜನವಾಗಲಿ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸ್ಟಾರ್ಟ್‍ಅಪ್‍ಗಳ ಆವರಣ ಲಾಂಚ್‍ವರ್ಸ್‍ನಲ್ಲಿ ಡಿಜಿ ಕಾಂಪ್ ಟೆಕ್ನಾಲಜೀಸ್ ಎನ್ನುವ ಸ್ಟಾರ್ಟ್‍ಅಪ್ ಸಂಸ್ಥೆಯನ್ನು ಮೇ .27 ರಂದು ಉದ್ಘಾಟಿಸಿ ಮಾತನಾಡಿದರು.
ನಮ್ಮ ಕಾಲೇಜು ಸಮಾಜಕ್ಕೆ ಒಳಿತಾಗುವ, ರೈತ ಸಮುದಾಯಕ್ಕೆ ಸಹಕಾರಿಯಾಗುವ ಯೋಜನಗಳ ಮೂಲಕ ಸಮಾಜಮುಖೀ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಇದೂ ಅದರ ಒಂದು ಅಂಗ ಎಂದು ನುಡಿದರು.
ಸಂಸ್ಥೆಯ ಸ್ಥಾಪಕರು ಮತ್ತು ಪಾಲುದಾರರಾದ ಕಾರ್ತಿಕ್ ಭಟ್ ಮಾತನಾಡಿ ಮಕ್ಕಳ ಆಟಿಕೆಯಿಂದ ಹಿಡಿದು ದೊಡ್ಡ ದೊಡ್ಡ ಉಪಕರಣಗಳೂ ಕೂಡಾ ಚೀನಾದಿಂದ ಆಮದಾಗುತ್ತಿವೆ. ಇದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಗಳು ನಡೆಯುತ್ತಲೇ ಇವೆ. ಆಮದಾಗುತ್ತಿರುವ ಕೆಲವು ಉಪಕರಣಗಳನ್ನು ಇಲ್ಲಿಯೇ ತಯಾರಿಸಬಹುದು ಎನ್ನುವ ದೃಷ್ಟಿಕೋನದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಇಲೆಕ್ಟ್ರಾನಿಕ್ಸ್ ಸಂಬಂಧಿಸಿದ ಪಿಸಿಬಿ ಗಳ ತಯಾರಿ, ಮೈಕ್ರೋ ಪ್ರೊಸೆಸರ್ ಜೋಡಣೆ ಮುಂತಾದ ಕಾರ್ಯವನ್ನು ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಪವರ್ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ತಯಾರಿಸುವ ಯೋಚನೆಯೂ ಇದೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ವಿಭಾಗ ಮುಖ್ಯಸ್ಥರು, ಸಂಸ್ಥೆಯ ಇನ್ನೋರ್ವ ಪಾಲುದಾರರಾದ ಪದ್ಮಸ್ವರೂಪ್ ಮುರ್ಗಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇಲೆಕ್ಟ್ರಾನಿಕ್ಸ್ ಪ್ರಯೋಗಾಲಯ ಮೇಲ್ವಿಚಾರಕ ಹರಿಪ್ರಸಾದ್.ಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Related Articles