ರಾಷ್ಟ್ರೀಯ ಮತದಾರರ ದಿನಾಚರಣೆ…..
ಬಂಟ್ವಾಳ: ಕೇಂದ್ರ ಚುನಾವಣಾ ಅಯೋಗದ ಸಂಸ್ಥಾಪನಾ ದಿನದ ಅಂಗವಾಗಿ ಶನಿವಾರ ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಬಿ.ಸಿ.ರೋಡಿನಲ್ಲಿರುವ ತಾ.ಪಂ.ನ ಸಾಮರ್ಥ್ಯ ಸೌಧದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಾ.ಪಂ.ನ ವ್ಯವಸ್ಥಾಪಕಿ ಶಾಂಭವಿ ಎಸ್.ರಾವ್, ಸಂಪನ್ಮೂಲ ವ್ಯಕ್ತಿ, ಸರಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಸನತ್‌ರಾಮ್, ಬಿ.ಮೂಡ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ರಝಾಕ್ ಅನಂತಾಡಿ, ಶಿಕ್ಷಣ ಸಂಯೋಜಕಿ ಸುಶೀಲಾ, ಕಂದಾಯ ಇಲಾಖೆಯ ರಾಜ್‌ಕುಮಾರ್, ಶಿಕ್ಷಕ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಕ್ಕೆ ಆಯೋಜಿಸಿದ್ದ ಪ್ರಬಂಧ, ರಸಪ್ರಶ್ನೆ ಹಾಗೂ ಪ್ರಹಸನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಿಎಲ್‌ಒಗಳಿಗೆ ಗುರುತಿನ ಚೀಟಿ , ಹೊಸ ಮತದಾರರಿಗೆ ನೂತನ ಶೈಲಿಯ ಗುರುತಿನ ಚೀಟಿ ನೀಡಲಾಯಿತು. ಬಳಿಕ ಮತದಾನ ದಿನಾಚರಣೆ ಹಾಗೂ ಮತದಾನದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.