ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮಂಗಳೂರಿನಲ್ಲಿ ಬಂಧನ…

ಬಂಟ್ವಾಳ, ಜು. 17: ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದ ಯುವತಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಆರೋಪಿ ಇಲಿ ವಿಷ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜುಲೈ 16ರ ಸಂಜೆ  ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ  21 ವರ್ಷದ ಯುವತಿ ಲಾವಣ್ಯ ಅವರ ಮೇಲೆ ಆರೋಪಿ ಚೇತನ್ ಮಾರಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡ ಲಾವಣ್ಯ ಅವರು ಮೃತಪಟ್ಟಿದ್ದರು. ಪ್ರಾಥಮಿಕ ತನಿಖೆಯಲ್ಲಿ ಏಕಪಕ್ಷೀಯ ಪ್ರೇಮವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದ ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ತಂಡಗಳು ವಿವಿಧ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ಕಾರ್ಯಾಚರಣೆಯ ಫಲವಾಗಿ ಆರೋಪಿ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಬಂಧನದ ವೇಳೆ ಆರೋಪಿ ಇಲಿ ವಿಷ ಸೇವಿಸಿದ್ದರಿಂದ ಆರೋಗ್ಯ ಹದಗೆಟ್ಟಿದ್ದು, ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

Related Articles