ವಿಧಾನ ಪರಿಷತ್ ಸದಸ್ಯನಾಗಿ ಜನರ ಪರ ಧ್ವನಿ – ಐವನ್ ಡಿ’ಸೋಜಾ…
ಮಂಗಳೂರು: 2014ರಿಂದ ಈವರೆಗೆ ವಿಧಾನ ಪರಿಷತ್ ಸದಸ್ಯನಾಗಿ ಶಾಸನ ಸಭೆಯ ಒಂದೂ ಸಭೆಗೂ ಗೈರು ಹಾಜರಾಗದೆ ಜನರ ಪರ ಧ್ವನಿ ಎತ್ತಿದ ತೃಪ್ತಿ ತನಗಿದೆ ಎಂದು ಐವನ್ ಡಿ’ಸೋಜಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯತನದ 6 ವರ್ಷಗಳ ಸೇವಾವಧಿ ಮಂಗಳವಾರ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ವಿವಿಧ ನಿಗಮ, ಯೋಜನೆ, ಅಭಿವೃದ್ಧಿ ಕಾರ್ಯಗಳಡಿ 46 ಕೋಟಿ ರೂ. ಅನುದಾನವನ್ನು ಸರಕಾರದಿಂದ ಪಡೆದು ಜನಸೇವೆಗೆ ಸದ್ಬಳಕೆ ಮಾಡಲಾಗಿದೆ. 1,600ಕ್ಕೂ ಅಧಿಕ ಅನಾರೋಗ್ಯ ಪೀಡಿತ ಅರ್ಜಿದಾರರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಡಿ 6.62 ಕೋಟಿ ರೂ. ವಿತರಿಸಲಾಗಿದೆ ಎಂದರು.
ಶಾಸಕರ ನಿಧಿಯಿಂದ ಸರಕಾರಿ, ಅನುದಾನಿತ 25 ಶಾಲೆಗಳಿಗೆ 3 ಕಿಲೋ ವ್ಯಾಟ್‌ನ ಸೌರಶಕ್ತಿ ಘಟಕಗಳನ್ನು ಒದಗಿಸಲಾಗಿದೆ. ಪೆರಾಬೆಯ ಎಂಡೋ ಪೀಡಿತರ ಮನೆಗಳಿಗೆ ಸೌರಶಕ್ತಿ ನೀಡಲಾಗಿದೆ. ಪತ್ನಿ ಡಾ| ಕವಿತಾ ಡಿ’ಸೋಜಾ ಅವರ ಸಹಾಯದಿಂದ 63 ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ. 350ಕ್ಕೂ ಅಧಿಕ ಉಚಿತ ಶಸ್ತ್ರಚಿಕಿತ್ಸೆ ಹಾಗೂ 3,500ಕ್ಕೂ ಅಧಿಕ ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. ಜಿಲ್ಲೆಯಲ್ಲಿ 68 ಸುಸಜ್ಜಿತ ರಿಕ್ಷಾ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ನಿಟ್ಟಿನಲ್ಲಿ ಮಾಡಿದ ಪ್ರಯತ್ನದ ಫಲವಾಗಿ 2019-20ನೇ ಬಜೆಟ್‌ನಲ್ಲಿ 200 ಕೋಟಿ ರೂ. ಅನುದಾನದೊಂದಿಗೆ ನಿಗಮ ಸ್ಥಾಪನೆಗೆ ಸರಕಾರ ಕ್ರಮ ಕೈಗೊಂಡಿದೆ ಎಂದೂ ತಿಳಿಸಿದರು.
ಶಾಸಕ ಯು. ಟಿ. ಖಾದರ್, ಎಂ. ಶಶಿಧರ ಹೆಗ್ಡೆ, ಮನುರಾಜ್,ಇಬ್ರಾಹಿಂ ಕೋಡಿಜಾಲ್, ನಾಗೇಂದ್ರ ಕುಮಾರ್, ನಝೀರ್ ಬಜಾಲ್, ಸಬಿತಾ ಮಿಸ್ಕಿತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.