ಆಸ್ಪತ್ರೆಯಲ್ಲಿ ತಾಯಿಯೊಂದಿಗಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ…

ಶಿವಮೊಗ್ಗ: ತಾಯಿಯ ಆರೈಕೆಗೆ ಆಸ್ಪತ್ರೆಗೆ ಬಂದ ಅಪ್ರಾಪ್ತ ಬಾಲಕಿಯ ಮೇಲೆ ಆಸ್ಪತ್ರೆಯ ವಾರ್ಡ್ ಬಾಯ್ ಹಾಗೂ ಅವನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವಾರ್ಡ್ ಬಾಯ್ ಮನೋಜ್ ಮತ್ತು ಆತನ ಮೂವರು ಸಹಚರರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ವಾರ್ಡ್ ಬಾಯ್ ಆಗಿದ್ದ ಮನೋಜ್ ತಾಯಿ ಮತ್ತು ಮಗಳಿಗೆ ಆಹಾರವನ್ನು ತರುವ ಮೂಲಕ ಆಕೆಗೆ ಸಮೀಪವಾಗಿದ್ದ. ಕೆಲವು ದಿನಗಳ ಹಿಂದೆ ಹಿಂಸಾತ್ಮಕ ಘಟನೆಗಳು ಸಂಭವಿಸಿದ ನಂತರ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು. ಆ ಕಾರಣದಿಂದ ಹೋಟೆಲ್ ಗಳು ಮುಚ್ಚಲ್ಪಟ್ಟಿದ್ದವು. ಅದರಿಂದ ಬಾಲಕಿಗೆ ತಾಯಿಗೆ ನೀಡಲು ಆಹಾರ ಸಿಕ್ಕಿರಲಿಲ್ಲ. ಹಾಗಾಗಿ ಆಕೆಗೆ ನೆರವಾಗುವ ನೆಪದಲ್ಲಿ ಬಾಲಕಿಯನ್ನು ಮನೋಜ್ ಕಾರಿನಲ್ಲಿ ಕರೆದೊಯ್ದಿದ್ದಾನೆ. ಕಾರಿನಲ್ಲಿ ಅವನ ಮೂವರು ಸ್ನೇಹಿತರೂ ಇದ್ದರೆನ್ನಲಾಗಿದೆ. ನಂತರ ನಿರ್ಜನ ಪ್ರದೇಶದಲ್ಲಿ ಆ ನಾಲ್ವರೂ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಬಾಲಕಿಯ ತಾಯಿ ಅಪರಾಧದ ಬಗ್ಗೆ ತಿಳಿದು ದೂರು ಕೊಟ್ಟಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ನಡೆದಿದೆ.

Sponsors

Related Articles

Leave a Reply

Your email address will not be published. Required fields are marked *

Back to top button