ಅಗ್ನಿ ಅವಘಡ ತಪ್ಪಿಸಲು ತಿಳುವಳಿಕೆ ಅಗತ್ಯ-ಲೀಲಾಧರ್…..
ಪುತ್ತೂರು: ಬೆಂಕಿಯ ತಾಪಮಾನ ಮತ್ತು ಗಾಳಿಯ ಪೂರೈಕೆಯನ್ನು ಕಡಿಮೆ ಮಾಡುವ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಯಾವುದೇ ನಿವಾರಣಾ ಉಪಕರಣಗಳಿದ್ದರೂ ಅದನ್ನು ಬಳಸುವ ಬಗ್ಗೆ ತಿಳುವಳಿಕೆ ಹೊಂದಬೇಕು. ಇಲ್ಲವಾದರೆ ಅನಿವಾರ್ಯ ಸಂದರ್ಭಗಳಲ್ಲಿ ಅದು ಉಪಯೋಗಕ್ಕೆ ಬರಲಾರದು ಎಂದು ಪುತ್ತೂರು ಅಗ್ನಿಶಾಮಕ ವಿಭಾಗದ ಪ್ರಮುಖ ಅಗ್ನಿಶಾಮಕ ಅಧಿಕಾರಿ ಲೀಲಾಧರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ರೆಡ್‍ಕ್ರಾಸ್ ಸೊಸೈಟಿಯ ಆಶ್ರಯದಲ್ಲಿ ಗುರುವಾರ ನಡೆದ ಆಗ್ನಿಶಾಮಕ ವ್ಯವಸ್ಥೆ, ಪರಿಚಯ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಣ್ಣೆ, ಗ್ಯಾಸ್, ವಿದ್ಯುಚ್ಚಕ್ತಿ ಮುಂತಾದವುಗಳಿಂದ ಅಗ್ನಿ ಅವಘಡಗಳು ಸಂಭವಿಸಿದಾಗ ಏಕರೂಪದ ಶಾಮಕ ವ್ಯವಸ್ಥೆ ಕೆಲಸಮಾಡಲಾರದು. ಅದಕ್ಕೆ ಅದರದ್ದೇ ಆದ ಸೂಕ್ತ ನಿವಾರಣಾ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಅಗ್ನಿ ಅವಗಢಗಳು ಸಂಭವಿಸಿದಾಗ ಮೂರು ನಿಮಿಷಗಳೊಳಗೆ ಹತೋಟಿಗೆ ತಂದರೆ ಮಾತ್ರ ಸಂಭಾವ್ಯ ದುರಂತವನ್ನು ತಪ್ಪಿಸಬಹುದು ಎಂದರು.
ಕಾಲೇಜ್‍ನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇ ಗೌಡ ಮತ್ತು ಪುತ್ತೂರು ಅಗ್ನಿಶಾಮಕ ಠಾಣಾಧಿಕಾರಿ ಸುಂದರ್.ವಿ ಉಪಸ್ಥಿತರಿದ್ದರು.ಅಗ್ನಿಶಾಮಕ ಸಿಬ್ಬಂದಿಗಳಾದ ಮೊಹಮ್ಮದ್ ಶಹಾದ್, ಅಬ್ದುಲ್ ಅಜೀಜ್, ಗೃಹ ರಕ್ಷಕರಾದ ನಿಖಿಲ್ ರಾಜ್ ಮತ್ತು ಶಿವಪ್ರಸಾದ್ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ಆಚಾರ್ ಸ್ವಾಗತಿಸಿದರು. ರೆಡ್‍ಕ್ರಾಸ್ ಸೊಸೈಟಿಯ ಸಂಯೋಜಕ ಡಾ.ಚೇತನ್.ಪಿ.ಡಿ ವಂದಿಸಿದರು.