ದ.ಕ – ಇಂದು ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ, ಓರ್ವ ಗುಣಮುಖ ….
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರದಂದೂ ಕೂಡ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ ಹಾಗೂ ಕೊರೊನಾ ಸೋಂಕಿತ ಮತ್ತೊಬ್ಬರು ಬಿಡುಗಡೆಗೊಂಡಿದ್ದಾರೆ.
ಮಾರ್ಚ್ 21ರಂದು ದುಬೈನಿಂದ ಬಂದಿದ್ದ ಇವರಲ್ಲಿ ಕೊರೊನಾ ಸೋಂಕು ಲಕ್ಷಣಗಳು ಪತ್ತೆಯಾಗಿತ್ತು. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ ಸಂದರ್ಭ ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ತಕ್ಷಣ ಆರೋಗ್ಯ ಇಲಾಖೆ ಅವರನ್ನು ತೀವ್ರ ನಿಗಾದಲ್ಲಿರಿಸಿ ಚಿಕಿತ್ಸೆ ಮುಂದುವರೆಸಿದ್ದರು. ಇದೀಗ ಅವರು ಗುಣಮುಖರಾಗಿದ್ದಾರೆ. ಏಪ್ರಿಲ್ 7 ಹಾಗೂ 8ರಂದು ಇವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಆ ಮೂಲಕ ದ.ಕ. ಜಿಲ್ಲೆಯಲ್ಲಿ 12 ಮಂದಿ ಸೋಂಕಿತರ ಪೈಕಿ ಐವರು ಡಿಸ್ಚಾರ್ಜ್ ಗೊಂಡಂತಾಗಿದೆ. ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸ್ಪಷ್ಟನೆ ನೀಡಿದ್ದಾರೆ.