ಅಮ್ಮನ ಮೊಬೈಲ್ ಸಿಕ್ಕರೆ ಹಿಂದಿರುಗಿಸಿ – ತಾಯಿ ಕಳೆದುಕೊಂಡ ಹುಡುಗಿಯಿಂದ ಪತ್ರ…

ಕೊಡಗು: ಕೊರೊನಾ ದಿಂದ ತಾಯಿಯನ್ನು ಕಳೆದುಕೊಂಡ 10 ವರ್ಷದ ಬಾಲಕಿಯೊಬ್ಬಳು ಅಮ್ಮನ ನೆನಪಿಗಾಗಿ ಇದ್ದ ಮೊಬೈಲ್​ ಅನ್ನು ಹುಡುಕಿ ಕೊಡುವಂತೆ ಪತ್ರದ ಮೂಲಕ ಮನವಿ ಮಾಡಿದ ಘಟನೆ ವರದಿಯಾಗಿದೆ.
ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಹೆಸರಿನ ಪುಟ್ಟ ಹುಡುಗಿ ತನ್ನ ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾಳೆ. ತಾಯಿ ಜೊತೆಗೆ ಮಾತನಾಡಲು ಬಳಸುತ್ತಿದ್ದ ಫೋನ್ ಕಾಣೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ತನ್ನ ತಾಯಿಯೊಂದಿಗೆ ಇದ್ದ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದಾಳೆ.
ನನಗೆ, ನನ್ನ ತಂದೆ ಮತ್ತು ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ತಂದೆ ಮತ್ತು ನಾನು ಹೋಂ ಐಸೋಲೇಷನ್​ನಲ್ಲಿ ಇದ್ದೆವು. ತಾಯಿಗೆ ಕೊರೊನಾ ತೀವ್ರವಾಗಿದ್ದರಿಂದ ಮೇ 6ರಂದು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ತಾಯಿ ಚಿಕಿತ್ಸೆ ಫಲಕಾರಿಯಾದೆ ಮೇ 16ರಂದು ಬೆಳಿಗ್ಗೆ 6 ಗಂಟೆಗೆ ಮೃತಪಟ್ಟಿದ್ದಾರೆ. ಅಮ್ಮ ಇನ್ನಿಲ್ಲ ಎನ್ನುವ ನೋವನ್ನು ನುಂಗುತ್ತಿದ್ದೇನೆ. ಆದರೆ ಮನೆಯಲ್ಲಿ ಅಮ್ಮನೊಂದಿಗೆ ಇದ್ದ ಪ್ರತಿ ಕ್ಷಣವು ನೆನಪಿಗೆ ಬರುತ್ತಿದೆ. ಅದರಲ್ಲೂ ಲಾಕ್​ಡೌನ್ ಸಂದರ್ಭದಲ್ಲಿ ಅಮ್ಮನೇ ನನಗೆ ಎಲ್ಲಾ. ಮನೆಯಲ್ಲಿ ಅಮ್ಮನೊಂದಿಗೆ ಆಡುತ್ತಿದ್ದ ಆಟಗಳು ನನ್ನನ್ನು ಕಾಡುತ್ತಿದೆ. ಕಳೆದ ಪ್ರತಿಯೊಂದು ಸನ್ನಿವೇಶವು ಅಮ್ಮನ ಕೈಯಲ್ಲಿ ಇದ್ದ ಮೊಬೈಲ್​ನಲ್ಲಿದೆ. ಹೀಗಾಗಿ ಆ ಮೊಬೈಲ್ ​ನನಗೆ ಬೇಕು ಎಂದು ಹೃತಿಕ್ಷ ಮನವಿ ಮಾಡಿದ್ದಾಳೆ.
ತಾಯಿಯ ಮೃತದೇಹವನ್ನು ಆಸ್ಪತ್ರೆಯವರು ಹಸ್ತಾಂತರಿಸಿದ್ದು, ಆಸ್ಪತ್ರೆಯಲ್ಲಿ ಇದ್ದ ಅಮ್ಮನ ಇನ್ನಿತರ ಸಾಮಗ್ರಿಗಳನ್ನು ಸಿಬ್ಬಂದಿಗಳು ತಂದೆ ಕೈಗೆ ಇಟ್ಟಿದ್ದಾರೆ. ಆದರೆ ತಾಯಿ ಜೊತೆಗಿದ್ದ ಮೊಬೈಲ್ ಕಾಣಿಸುತ್ತಿಲ್ಲ. ಆಸ್ಪತ್ರೆಯವರ ಬಳಿ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಆ ಮೊಬೈಲ್​ನಲ್ಲಿ ನನ್ನ ತಾಯಿಯ ಜೊತೆಗಿದ್ದ ಸಾಕಷ್ಟು ನೆನಪುಗಳಿದೆ. ಹೀಗಾಗಿ ಮೊಬೈಲ್ ಹುಡುಕಿಕೊಡಿ ಎಂದು ನೊಂದ ಹುಡುಗಿ ಹೃತಿಕ್ಷ ಕೇಳಿಕೊಂಡಿದ್ದಾಳೆ.
ನನ್ನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ಕೊರೊನಾ ಕಾಲದಲ್ಲಿ ಓದಲು ಉಪಯೋಗವಾಗಲಿ ಎಂದು ಸ್ಯಾಮ್​ಸಂಗ್ ಮೊಬೈಲ್ ಕೊಡಿಸಿದ್ದರು. ಇದರಲ್ಲಿ ನನಗೆ ಆನ್​ಲೈನ್ ಕ್ಲಾಸ್ ಕೂಡ ನಡೆಯುತ್ತಿತ್ತು. ತಾಯಿಗೆ ಹುಷಾರಿಲ್ಲದ ಕಾರಣ ಇದು ಅವರ ಬಳಿ ಇತ್ತು. ಅಮ್ಮನ ಅಪ್ಪುಗೆಯಲ್ಲಿ ಇದ್ದ ಫೋಟೊಗಳು ಈ ಮೊಬೈಲ್​ನಲ್ಲಿ ಇದೆ. ಅಮ್ಮನ ಬಳಿ ಶುಕ್ರವಾರ ಸಂಜೆ (ಮೇ 15) ಮಾತನಾಡಿದ್ದೆ. ಆದರೆ ಶನಿವಾರ ಬೆಳಿಗ್ಗೆ ರಿಂಗ್ ಆದ ಫೋನ್ ಮಧ್ಯಾಹ್ನ ಸ್ವಿಚ್​ ಆಫ್ ಆಗಿದೆ. ಹೀಗಾಗಿ ನನ್ನ ತಾಯಿಯ ಮೊಬೈಲ್ ಹುಡುಕಿ ಕೋಡಿ ಎಂದು 5ನೇ ತರಗತಿ ಓದುತ್ತಿರುವ ಹೃತಿಕ್ಷ ಬೇಡಿಕೊಂಡಿದ್ದಾಳೆ.

Sponsors

Related Articles

Back to top button