ದೇಶದಲ್ಲಿ ಮತ್ತು ರಾಜ್ಯದಲ್ಲಿ ಅರಾಜಕತೆ- ಕಾಂಗ್ರೇಸ್ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್…

ಸುಳ್ಯ: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಮಾತನ್ನು ಕೇಳದ ಸಚಿವರುಗಳು ಮತ್ತು ಅಧಿಕಾರಿಗಳು. ಬಿಜೆಪಿ ಶಾಸಕರು ಮತ್ತು ಸಚಿವರುಗಳ ನಡುವೆ ಗೊಂದಲ ಮತ್ತು ಭಿನ್ನಮತ. ಹಿರಿಯ ಐ ಎ ಎಸ್ ಅಧಿಕಾರಿ ಡಿ.ಕೆ ರವಿ ಅವರ ಸಾವಿನಲ್ಲಿ ಹೆಸರು ಕೇಳಿಬರುತ್ತಿದ್ದ ಮೈಸೂರು ಡಿ.ಸಿ. ರೋಹಿಣಿ ಸಿಂಧೂರಿ ಐ ಎ ಎಸ್ ಮತ್ತು ಶಿಲ್ಪಾ ನಾಗ್ ಐ ಎ ಎಸ್ ರವರ ನಡುವೆ ಪರಸ್ಪರ ಗಲಾಟೆ ಹಾಗೂ ವರ್ತಿಕಾ ಕಟಿಯಾರ್ ಐ ಪಿ ಎಸ್ ಮತ್ತು ನಿತಿನ್ ಶುಭಾಶ್ ಐ ಎಫ್ ಎಸ್ ರವರ ನಡುವೆ ಪರಸ್ಪರ ಗಲಾಟೆಗಳು ಸರಕಾರ ಮತ್ತು ಅಧಿಕಾರಿಗಳ ಮಧ್ಯೆ ಪರಸ್ಪರ ಭಿನ್ನಾಭಿಪ್ರಾಯಗಳು ಸೇರಿದಂತೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ತುರ್ತು ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕೋಮುವಾದದ ಬೀಜ ಬಿತ್ತಲು ಪ್ರಯತ್ನಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ರವಿ ಸುಬ್ರಮಣ್ಯ ರವರ ನಡವಳಿಕೆಗಳು ನಾಚಿಕೆ ತರುವಂತದ್ದು.ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಮುಸ್ಲಿಂ ಸಂಘಟನೆಗಳು ಕೋವಿಡ್ ಸಂದರ್ಭದಲ್ಲಿ ಹಲವಾರು ಜನಪರ,ಸಮಾಜಪರ ಕೆಲಸಗಳನ್ನು ಮಾಡಿ ಜಾತಿ ,ಮತ ,ಪಕ್ಷ ಭೇದ ನೋಡದೆ ಕೋವಿಡ್ ರೋಗಿಗಳನ್ನು ಆರೈಕೆ ಮಾಡುವುದು, ಮೃತರ ಶವ ಸಂಸ್ಕಾರದಲ್ಲಿ ಬಹುತೇಕ ಸಕ್ರಿಯವಾಗಿ ಪಾಲ್ಗೊಂಡ ನಿರ್ದೇಶನ ಕಾಣಲು ಸಾಧ್ಯವಾಯಿತು. ಆದರೆ ಈ ಬಗ್ಗೆ ಬಿಜೆಪಿಯವರಾಗಲಿ ಸರಕಾರವಾಗಲಿ ಮುಸ್ಲಿಂ ಸಂಘಟನೆಯನ್ನು ಅಭಿನಂದಿಸಿಲ್ಲ, ಅವರಲ್ಲಿ ಕೃತಜ್ಞತೆ ಸಲ್ಲಿಸಲೂ ಸೌಜನ್ಯತೆ ಇಲ್ಲದಂತಾಗಿದೆ. ಮುಸ್ಲಿಂ ಸಮುದಾಯದ ಯಾವುದಾದರು ಸಣ್ಣ ಪುಟ್ಟ ತಪ್ಪುಗಳಿದ್ದರೆ ಅದನ್ನು ದೇಶದ್ರೋಹವೆಂದು ಬಿಂಬಿಸುತ್ತಿದ್ದರು. ಈಗ ಇಷ್ಟೆಲ್ಲಾ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ಒಂದು ಚಿಕ್ಕ ಶ್ಲಾಘನೆಯನ್ನೂ ಮಾಡಲಿಲ್ಲ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇಶದಲ್ಲಿ ಜನರು ಆರ್ಥಿಕ ಬಿಕ್ಕಟ್ಟು ಅನುಭವಿಸುವ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಾಗುತ್ತಿದೆ. ಕೇಂದ್ರ ಸರಕಾರಕ್ಕೆ ಮತ್ತು ರಾಜ್ಯ ಸರಕಾರಕ್ಕೆ ಈ ದೇಶದ ಸಾಮಾನ್ಯ ಜನರ ಮೇಲೆ ಅನುಕಂಪವಿಲ್ಲದಂತಾಗಿದೆ. ಪೆಟ್ರೋಲ್ ಮತ್ತು ಡೀಸಲ್ ನ ಮೇಲೆ ಹೇರಿರುವಂತಹ ಸೆಸ್ಸುಗಳನ್ನು ಕಡಿತಗೊಳಿಸಿ ಬೆಲೆಯನ್ನು ಇಳಿಕೆ ಮಾಡಲು ಪ್ರಯತ್ನಿಸಬೇಕಿತ್ತು. ಅದೇ ರೀತಿ ದೈನಂದಿನ ಖರ್ಚುಗಳು ಹೆಚ್ಚಾಗುತ್ತಿದ್ದು ದೇಶದ ಪ್ರಜೆಗಳಿಗೆ ಆದಾಯವಿಲ್ಲದಂತಾಗಿದೆ. 18 ರಿಂದ 45 ವರ್ಷ ಪ್ರಾಯದವರಿಗೆ ಲಸಿಕೆ ಹಂಚಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಲಸಿಕೆ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿರುವ ಸರಕಾರ ಸ್ಪಷ್ಠ ಗೊತ್ತು ಗುರಿ ಇಲ್ಲದೆ ನಡೆದುಕೊಂಡ ಬಗ್ಗೆ ಸುಪ್ರಿಂ ಕೋರ್ಟ್ ಮತ್ತು ಹೈ ಕೋರ್ಟ್ ಎಚ್ಚರಿಕೆ ನೀಡಿದೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರವು ಜನರಿಗೆ ಉಚಿತವಾಗಿ ಲಸಿಕೆ ನೀಡಲು ಸಾಧ್ಯವಾಗದ ಸರಕಾರವಾಗಿದೆ. ಮೊದಮೊದಲು ಪ್ರಧಾನಿಯ ಅಣತಿಯಂತೆ ನಡೆಯುತ್ತಿದ್ದ ಸುಪ್ರಿಂ ಕೋರ್ಟ್ ಹಾಗೂ ಹೈ ಕೋರ್ಟ್ ಗಳು ಈಗ ಲಸಿಕೆ ಹಂಚಿಕೆ ಮತ್ತು ಕೋವಿಡ್ ವಿಷಯವಾಗಿ ಧ್ವನಿ ಎತ್ತುತ್ತಿರುವುದು ಕೇಂದ್ರ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಸರಕಾರದ ಪರವಾಗಿ ಮಾತನಾಡುತ್ತಿರುವರೆಲ್ಲ ಈಗ ವಿರುದ್ಧವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಅಭಿವೃದ್ಧಿಗೆ ಇರಬೇಕೇ ವಿನಃ ಅಧಿಕಾರದ ಮತ್ತಿನಲ್ಲಿ ತೇಲಾಡಲಿಕ್ಕಲ್ಲ ಮತ್ತು ಅಧಿಕಾರದ ಹಿಂದೆ ಲಾಭಿ ಮಾಡಲಿಕ್ಕೂ ಅಲ್ಲ ಎಂದು ಕಾಂಗ್ರೇಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ರವರು ಕೇಂದ್ರ ಮತ್ತು ರಾಜ್ಯ ಸರಕಾರದ ನಡವಳಿಕೆಯನ್ನು ಪತ್ರಿಕಾ ಪ್ರಕಟನೆಯ ಮೂಲಕ ಟೀಕಿಸಿದ್ದಾರೆ.

Sponsors

Related Articles

Back to top button