ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಎಂಬಿಎ ವಿಭಾಗದ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ…

ಪುತ್ತೂರು: ಸರ್ಕಾರವು ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರ ವ್ಯಾಪ್ತಿಯನ್ನು ವ್ಯಾಖ್ಯಾನಿಸುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ಧರಿಸುತ್ತದೆ. ಹೀಗಾಗಿ ಸಂವಿಧಾನವು ಎಲ್ಲಾ ಕಾನೂನುಗಳಿಗಿಂತ ಮಿಗಿಲಾದುದು ಎಂದು ಬಿಇಎಲ್ ಸಂಸ್ಥೆಯ ವಿಶ್ರಾಂತ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಟಿ.ಎನ್.ಸಿ.ಲಕ್ಷ್ಮಿನರಸಿಂಹನ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಆಶ್ರಯದಲ್ಲಿ ಶ್ರೀರಾಮ ಸಭಾ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ ಮತ್ತು ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನವೆಂದು ಪರಿಗಣಿಸಲಾಗಿದೆ ಎಂದರು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಜನಸಾಮಾನ್ಯರಲ್ಲಿ ಅದರಲ್ಲೂ ಮುಖ್ಯವಾಗಿ ಯುವಜನತೆಯಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ ಎಂದರು. ಸಂವಿಧಾನದ ಆಶಯಕ್ಕೆ ಎಲ್ಲರೂ ಬದ್ದರಾಗಿದ್ದು ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಲು ಸನ್ನದ್ಧರಾಗಿರಬೇಕು ಎಂದರು.
ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ವಿವಿಧ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು.ವಿದ್ಯಾರ್ಥಿಗಳಾದ ಸರೋಶ್ ನಾಯ್ಕ್ ಸ್ವಾಗತಿಸಿ, ರಾಜಶ್ರೀ ವಂದಿಸಿದರು. ಪೃಥ್ವಿಶಂಕರ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button