ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಪರಿಷ್ಕರಣಾ ಯಂತ್ರದ ಆವಿಷ್ಕಾರ…

ಪುತ್ತೂರು: ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಬಗ್ಗೆ ಸಾಕಷ್ಟು ಚಿಂತನ ಮಂಥನಗಳು ನಡೆಯುತ್ತಲೇ ಇವೆ. ಸಂಶೋಧನೆಗಳು ಮುಂದುವರಿದಿವೆ ಮತ್ತು ಅನೇಕ ಯಂತ್ರಗಳ ಆವಿಷ್ಕಾರವಾಗಿದೆ. ಆದರೆ ಇದರಲ್ಲಿ ಒಂದಲ್ಲ ಒಂದು ರೀತಿಯ ಮಾಲಿನ್ಯಗಳು ಇದ್ದೇ ಇವೆ. ಪ್ಲಾಸ್ಟಿಕನ್ನು ಮಾಲಿನ್ಯ ರಹಿತವಾಗಿ ಪರಿಷ್ಕರಿಸಿ ಇದನ್ನು ಮರುರಚನೆ ಮಾಡಬೇಕು ಎನ್ನುವ ಯೋಜನೆಯೊಂದಿಗೆ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಮುಖುರ ಎನ್ನುವ ಯಂತ್ರವೊಂದನ್ನು ಆವಿಷ್ಕರಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚಿಸಲ್ಪಡುವ ವಿಷಯಗಳಲ್ಲಿ ಒಂದಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರಗಳಲ್ಲಿ, ಕಾಡು, ನದಿ, ಸಮುದ್ರಗಳಲ್ಲಿ ಅಪಾರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಾವು ಕಾಣಬಹುದಾಗಿದೆ. ಪ್ಲಾಸ್ಟಿಕ್‍ನಿಂದ ಬರೀ ತ್ಯಾಜ್ಯ ಸಂಗ್ರಹ ಮಾತ್ರವಲ್ಲ, ತನ್ನಲ್ಲಿರುವ ರಾಸಾಯನಿಕಗಳಿಂದ ಮಾನವನಿಗೆ ಮತ್ತು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಇದಕ್ಕೆ ಕಾರಣವೆಂದರೆ ಇದರ ಅತಿಯಾದ ಬಳಕೆ ಮತ್ತು ಕರಗದಿರುವಿಕೆ. ಪ್ರಾರಂಭದಲ್ಲಿ ಸೂರ್ಯನ ಬೆಳಕು, ಮಳೆ ಮುಂತಾದವುಗಳಿಂದ ಇದು ಕರಗುತ್ತದೆ ಎಂದೇ ಭಾವಿಸಲಾಗಿತ್ತು. ನಂತರ ಸಮುದ್ರದ ನೀರಿನಲ್ಲಿ ಕರಗುತ್ತದೆ ಎಂದು ತಿಳಿಯಲಾಗಿತ್ತು ಆದರೆ ಈ ನಂಬಿಕೆಗಳು ಸುಳ್ಳು ಎನ್ನುವುದು ಸರ್ವವಿದಿತವಾಗಿದೆ. ಸೂರ್ಯನ ಬೆಳಕಿಗೆ ಒಡ್ಡಿದ ಪ್ಲಾಸ್ಟಿಕ್‍ನಿಂದ ವಿಷಕಾರಿ ಅನಿಲಗಳು ಉತ್ಪತ್ತಿಯಾಗಿ ಪರಿಸರಕ್ಕೆ ಮಾರಕವಾಗುತ್ತಿದೆ. ಅಂದಾಜುಗಳ ಪ್ರಕಾರ ಭಾರತದಲ್ಲಿ ಪ್ರತಿದಿನ 25940 ಟನ್‍ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 10376 ಟನ್‍ಗಳಷ್ಟು ಪ್ಲಾಸ್ಟಿಕ್ ಸಂಗ್ರಹವಾಗದೇ ಉಳಿಯುತ್ತದೆ. ಇದು ಎಲ್ಲೆಂದರಲ್ಲಿ ಹರಡಿ ಪರಿಸರಕ್ಕೆ ಮತ್ತು ಜೀವಿಗಳಿಗೆ ಪ್ರಾಣ ಕಂಟಕವಾಗಿದೆ.
ಇದರಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಸಣ್ಣ ಇಟ್ಟಿಗೆಗಳನ್ನಾಗಿ ಪರಿವರ್ತಿಸಲಾಗುತ್ತದೆ. ಗಂಟೆಗೆ ಸುಮಾರು 2 ಕೆಜಿಯಂತೆ ದಿನಕ್ಕೆ 25 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಇದರಲ್ಲಿ ಬಳಸಬಹುದು. ಮನುಷ್ಯನಿಗೆ ಯಾವುದೇ ರೀತಿಯ ಬಿಸಿ ತಾಗದಂತೆ ಸಂಪೂರ್ಣ ಸುರಕ್ಷಿತವಾಗಿ ಬಳಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಯಂತ್ರದಿಂದ ಯಾವುದೇ ಹೊಗೆಯಾಗಲಿ ಅಥವಾ ಮಾಲಿನ್ಯವಾಗಲೀ ಉಂಟಾಗುವುದಿಲ್ಲ. ಇಲ್ಲಿ ತಯಾರಿಸಲಾದ ಇಟ್ಟಿಗೆಯು 120 ಕಿಲೋ ನ್ಯೂಟನ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಸಿಮೆಂಟಿನಿಂದ ತಯಾರಿಸಿದ ಇಂಟರ್ ಲಾಕ್ ಧಾರಣಾ ಸಾಮರ್ಥ್ಯ 30 ಕಿಲೋ ನ್ಯೂಟನ್ ಮಾತ್ರ.
ಪ್ಲಾಸ್ಟಿಕ್ ಬಾಟಲಿ, ಚಾಕಲೇಟ್ ರ್ಯಾಪರ್ ಮುಂತಾದವುಗಳು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‍ಗಳಾಗಿದ್ದು ಬಿಸಿ ಮಾಡಿದಂತೆ ಗಟ್ಟಿಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಸಣ್ಣ ಸಣ್ಣ ಮಾದರಿಗಳ ನಿರ್ಮಾಣ ಕಷ್ಟಸಾಧ್ಯ. ಆದರೆ ದೊಡ್ಡ ಇಟ್ಟಿಗೆಗಳನ್ನು ನಿರ್ಮಿಸುವುದಕ್ಕೆ ಸಾಧ್ಯವಿದೆ. ಆದುದರಿಂದ ಈ ಯಂತ್ರದಲ್ಲಿ ಅದನ್ನು ಬಳಸಿಕೊಳ್ಳುತ್ತಿಲ್ಲ. ಸಧ್ಯ ಈ ಯಂತ್ರವನ್ನು ಕೈಯಿಂದಲೇ ನಿರ್ವಹಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ವಿನ್ಯಾಸವನ್ನು ರೂಪುಗೊಳಿಸಲಾಗುತ್ತಿದೆ. ಈ ಯಂತ್ರಕ್ಕೆ 1.43 ಲಕ್ಷ ವೆಚ್ಚ ತಗುಲಿದೆ. ರೋಟರಿ ಕ್ಲಬ್ ಪುತ್ತೂರು ಮತ್ತು ಪುತ್ತೂರು ಡಾಕ್ಟರ್ಸ್ ಅಸೋಸಿಯೇಶನ್‍ನವರು ಹಣಕಾಸಿನ ಸಹಾಯವನ್ನು ಮಾಡಿದ್ದು, ಸಾಧನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಪುತ್ತೂರು ಪುರಸಭೆಯ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮತ್ತು ಅಧಿಕಾರಿ ವರ್ಗದವರು ಈ ಯಂತ್ರವನ್ನು ವೀಕ್ಷಿಸಿದ್ದು ಇದರ ಕಾರ್ಯವಿಧಾನದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಈ ಯಂತ್ರವನ್ನು ಅಭಿವೃದ್ಧಿಪಡಿಸುವ ಬಗ್ಗೆ ಆಡಳಿತ ಮಂಡಳಿಯೊಡನೆ ಮಾತುಕತೆ ನಡೆಸಿದ್ದಾರೆ. ಅನೇಕ ಜನ ತಂತ್ರಜ್ಞರು, ಗಣ್ಯರು ಮತ್ತು ಪರಿಸರಾಸಕ್ತರು ಯಂತ್ರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಸುದರ್ಶನ್.ಎಂ.ಎಲ್ ಅವರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳಾದ ರಾಕೇಶ್ ಹೆಗ್ಡೆ, ಎ.ಬಿ.ಮೊನೀಶ್, ಆಕರ್ಷ.ವಿ.ಎಂ ಮತ್ತು ಗಣೇಶ ಇದನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button