ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಅಂತಾರಾಷ್ಟ್ರೀಯ ಸಮ್ಮೇಳನ ದೃಷ್ಟಿ-2023…

ಪುತ್ತೂರು: ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ತಾವು ಮಾಡುವ ಕೆಲಸದ ಬಗ್ಗೆ ಸ್ಪಷ್ಟತೆ ಇರಬೇಕು ಮತ್ತು ಆ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸುವ ಛಲ ಇರಬೇಕು ಎಂದು ಎನ್‍ಐಟಿಕೆ ಸುರತ್ಕಲ್‍ನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೋಹಿತ್.ಪಿ.ತಹಿಲಿಯಾನಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ಮತ್ತು ಎಂಸಿಎ ವಿಭಾಗ ಹಾಗೂ ಯುನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಎನ್ನುವ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ದೃಷ್ಟಿ-2023ಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಅದರಿಂದ ಸಮಾಜಕ್ಕೆ ಒಳಿತಾಗುವ ಉತ್ಪನ್ನಗಳನ್ನು ತಯಾರಿಸುವಲ್ಲಿ ಶ್ರಮಿಸಬೇಕು ಎಂದರು. ಕಂಪೆನಿಗಳು ಪ್ರತಿಭಾವಂತರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ಪ್ರಯತ್ನಿಸಬೇಕು ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ ಸುಲ್ತಾನೇಟ್ ಆಫ್ ಒಮನ್ ಮಸ್ಕತ್ತಿನ ಬ್ಯಾಂಕಿಂಗ್ ಮತ್ತು ಹಣಕಾಸು ಅಧ್ಯಯನ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಆನಂದ್ ಸೂರ್ಯನಾರಾಯಣ ಮಾತನಾಡಿ ಜೀವನದಲ್ಲಿ ಸಾಮರ್ಥ್ಯ, ಸ್ಪರ್ಧೆ ಮತ್ತು ಬದಲಾವಣೆ ಈ ಮೂರು ವಿಷಯಗಳು ಅಗಾಧ ಪರಿಣಾಮವನ್ನು ಬೀರುತ್ತವೆ. ನಿರಂತರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಗೌರವ ಅತಿಥಿಯಾಗಿದ್ದ ಯುನಿವರ್ಸಿಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾದ ಪ್ರಾದೇಶಿಕ ವ್ಯವಸ್ಥಾಪಕಿ ಶಶಿರೇಖಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಸಂಶೋಧನಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಬೆಳೆಸುವ ಸಂಸ್ಥೆಗಳಿಗೆ ತಮ್ಮ ವಿಶ್ವವಿದ್ಯಾನಿಲಯವು ನೆರವು ನೀಡುವುದಕ್ಕೆ ಬದ್ಧವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ ದೃಷ್ಟಿ-2023 ರಂತಹ ಸಮ್ಮೇಳನಗಳು ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಅತ್ಯಾಧುನಿಕ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಇಂತಹ ಸಮ್ಮೇಳನಗಳು ವಿದ್ಯಾರ್ಥಿಗಳ ಯೋಜನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸುವುದಕ್ಕೆ ಅವಕಾಶವನ್ನು ನೀಡುತ್ತವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಡೆಸುವ ಇಂತಹ ಕಾರ್ಯಕ್ರಮಗಳಿಗೆ ಆಡಳಿತ ಮಂಡಳಿಯು ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತದೆ, ಇದರ ಯಶಸ್ಸಿಗಾಗಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್, ಇತರ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ರೋಬಿನ್.ಎಂ.ಶಿಂಧೆ ಪ್ರಸ್ತಾವನೆಗೈದರು. ಎಂಸಿಎ ವಿಭಾಗದ ಪ್ರೊ.ಶೈಲೇಶ್ ವಂದಿಸಿದರು. ಎಂಸಿಎ ವಿಭಾಗದ ಪ್ರೊ.ನೀಮಾ ಕಾರ್ಯಕ್ರಮ ನಿರ್ವಹಿಸಿದರು.

