ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಗ್ರಾಮ ವಿಕಾಸ ಯೋಜನೆಯಲ್ಲಿ ಮನೆ ಹಸ್ತಾಂತರ…
 ಪುತ್ತೂರು: ನಾವೆಲ್ಲರೂ ಸಮಾಜದ ಒಂದು ಭಾಗ. ಈ ಸಮಾಜವನ್ನುಳಿದು ನಮಗೆ ಬೇರೆ ಅಸ್ತಿತ್ವವಿಲ್ಲ ಆದ್ದರಿಂದ ನಮ್ಮ ಶ್ರೇಯಸ್ಸಿನ ಜತೆಗೆ ಸುತ್ತಮುತ್ತಲಿನವರ ಹಿತದ ಕುರಿತಾಗಿಯೂ ನಾವು ಗಮನ ಹರಿಸುವುದು ಅಗತ್ಯ ಎಂದು ಲೋಕೋಪಯೋಗಿ ಇಲಾಖೆ ಸುಬ್ರಮಣ್ಯ ವಿಭಾಗದ ಎಂಜಿನಿಯರ್ ಹಾಗೂ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇದರ ಪುತ್ತೂರು ಘಟಕದ ಅಧ್ಯಕ್ಷರೂ ಆದ ಪ್ರಮೋದ್ ಕುಮಾರ್.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಗ್ರಾಮ ವಿಕಾಸ ಯೋಜನೆ, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘ ಹಾಗೂ ಕಾಲೇಜಿನ ಎನ್‍ಎಸ್‍ಎಸ್ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ಇತರ ದಾನಿಗಳ ಸಹಕಾರದೊಂದಿಗೆ ನೆಲಪ್ಪಾಲಿನಲ್ಲಿ ನಿರ್ಮಿಸಿದ ಮನೆಯನ್ನು ಫಲಾನುಭವಿಗಳಾದ ಕಮಲಾ ರಾಮಣ್ಣ ಅವರಿಗೆ ಹಸ್ತಾಂತರಿಸುವ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಸ್ವಾರ್ಥ, ಮೋಸ, ವಂಚನೆಗಳಿಂದ ಕುಲುಷಿತವಾಗಿರುವ ಸಮಾಜದಲ್ಲಿ ಸಮಾಜ ಸೇವೆ ಎನ್ನುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಇದೊಂದು ಸಾಮಾಜಿಕ ದುರಂತ ಎಂದು ಹೇಳಿದರು. ಬಡ ಕುಟುಂಬವೊಂದಕ್ಕೆ ಸಹಾಯ ಮಾಡುವ ಮೂಲಕ ಎಲ್ಲರೂ ಸಮಾಜದ ಗೌರವಕ್ಕೆ ಪಾತ್ರರಾಗಿದ್ದೀರಿ ಇನ್ನು ಮುಂದೆಯೂ ಇಂತಹ ಸಮಾಜಮುಖೀ ಕಾರ್ಯಕ್ರಮಗಳು ಸಂಸ್ಥೆಯ ಮೂಲಕ ನಡೆಯಲಿ ಎಂದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಮಾತನಾಡಿ ಸಮಾಜದಿಂದ ಉಪಕೃತರಾದ ನಾವು, ಸಮಾಜಕ್ಕೆ ನಮ್ಮಿಂದಾದಷ್ಟು ಸೇವೆ ಸಲ್ಲಿಸದೇ ಇದ್ದರೆ ನಮ್ಮ ವ್ಯಕ್ತಿತ್ವಕ್ಕೆ ಘನತೆ ಬಾರದು. ಇತರರಿಗಾಗಿ ಒಳ್ಳೆಯದನ್ನು ಬಯಸುವ ಮತ್ತು ಅವರ ಕಷ್ಟಕ್ಕೆ ಮರುಗುವ ಮನಸ್ಸು ನಮ್ಮದಾಗಲಿ ಎಂದು ಹೇಳಿದರು. ಕಾಲೇಜಿನ ಗ್ರಾಮ ವಿಕಾಸ ಯೋಜನೆ, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘ ಹಾಗೂ ಕಾಲೇಜಿನ ಎನ್‍ಎಸ್‍ಎಸ್ ಘಟಕ ಇದರ ಪದಾಧಿಕಾರಿಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಕಾಲೇಜಿನ ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಡಾ.ಸೌಮ್ಯ.ಎನ್.ಜೆ ಸ್ವಾಗತಿಸಿ, ವಂದಿಸಿದರು.






