ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ – ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ…
ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಮತ್ತು ಕಲ್ಕೂರ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಅಗರಿ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಥಾಮಸ್ ಪಿಂಟೋ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಪ್ರಾರಂಭವನ್ನು “ಸುವರ್ಣ ಕರ್ನಾಟಕದ ಸ್ವಾಭಿಮಾನದ ನಡೆ”ಯ ಮೂಲಕ ಪ್ರಾರಂಭಿಸಲಾಯಿತು. ರಾಷ್ಟೀಯ ಹೆದ್ದಾರಿಯಿಂದ ಸಭಾ ವೇದಿಕೆಯ ವರೆಗೆ ಆಯೋಜಿಸಿದ್ದ ಸುವರ್ಣ ಕರ್ನಾಟಕದ ಸ್ವಾಭಿಮಾನದ ನಡೆಯಲ್ಲಿ ಟ್ರ್ಯಾಕ್ಟರ್, ಬೈಕುಗಳು, ಕಾರುಗಳು, ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿಗಳು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸಿ, ಕನ್ನಡ ಭಾಷಾಭಿಮಾನದ ಘೋಷಣೆಯನ್ನು ಮುಗಿಲೆತ್ತರಕ್ಕೆ ಮೊಳಗಿಸಿದರು.
ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್, ವಿದ್ಯಾರ್ಥಿ ಸಂಯೋಜಕರಾದ ಶ್ರೀ ಲಿಂಗರಾಜ್ ಬಟ್ಟೂರ್, ಶ್ರೀ ತೇಜಸ್ ಮತ್ತು ಕುಮಾರಿ ಚೈತಾಲಿ ಎನ್. ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ರವರು ಮಾತನಾಡಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕನ್ನಡ ನಾಡಿನ ಮಣ್ಣಿನ ಅವಿನಾಭಾವ ಸಂಬಂಧದ ಕುರಿತು ಮಾತನಾಡಿದ ಅವರು, ಕನ್ನಡ ನುಡಿ, ನಾಡು, ಭಾಷೆ, ಸಂಸ್ಕೃತಿ, ಆಚಾರ ವಿಚಾರ ಮತ್ತು ಜಾನಪದ ಪರಂಪರೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ವಿಶ್ವವಿದ್ಯಾಲಯದ ಮಟ್ಟದಲ್ಲಿ, ಯುವ ವಿದ್ಯಾರ್ಥಿಗಳ ಶಕ್ತಿ ಸಮೂಹದ ಮಧ್ಯದಲ್ಲಿ ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕೆ ನನ್ನ ಮನಸ್ಸು ತುಂಬಿ ಬಂದಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವ ಶಕ್ತಿ ಜಾಗೃತವಾದರೆ ರಾಷ್ಟ್ರ ಶಕ್ತಿ ಜಾಗೃತವಾಗುತ್ತದೆ, ರಾಷ್ಟ್ರ ಶಕ್ತಿ ಜಾಗೃತವಾದರೆ ಪ್ರಪಂಚವು ಸಾತ್ವಿಕ ಶಕ್ತಿಯ ನೆಲೆಯಲ್ಲಿ ಬದುಕನ್ನು ಕಂಡುಕೊಳ್ಳುತ್ತದೆ. ನೀವು ಇಂದು ಆಯೋಜಿಸಿದ ಭವ್ಯ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರವು ಕಂಡುಕೊಳ್ಳಬೇಕು. ಪ್ರಸ್ತುತ ಯುವ ಪೀಳಿಗೆಯಲ್ಲಿ ಮಾಯವಾಗುತ್ತಿರುವ ಭಾರತೀಯ ಭಾಷೆ ಮತ್ತು ಸಂಸ್ಕೃತಿಯ ಭವ್ಯ ಅನಾವರಣವನ್ನು ಇಲ್ಲಿನ ವಿದ್ಯಾರ್ಥಿಗಳು ಇಂದು ಮಾಡಿದ್ದಾರೆ. ಈ ನಾಡಿನ ಕಲೆ, ಸಾಹಿತ್ಯ, ಮಾತೃ ಸಂಸ್ಕೃತಿಯ ರಕ್ಷಣೆಗಾಗಿ ಇಂದು ಆಯೋಜಿಸಿದ ಈ ಅಭೂತಪೂರ್ವ ಕಾರ್ಯಕ್ರಮಕ್ಕಾಗಿ ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾಯರಿಗೆ ಹಾಗೂ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಗೆ ನಾನು ಮಂಗಳೂರಿನ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಕೃಷಿ ಸಂಸ್ಕೃತಿ ಭದ್ರವಾಗಿದ್ದರೆ ಋಷಿ ಸಂಸ್ಕೃತಿ ಉಳಿಯುತ್ತದೆ, ಕೃಷಿ ಸಂಸ್ಕೃತಿ ನಮ್ಮ ಮಾತೃ ಸಂಸ್ಕೃತಿ, ಟ್ರ್ಯಾಕ್ಟರ್ ಯಂತ್ರವನ್ನು ಇಂದಿನ ಮೆರವಣಿಗೆಯಲ್ಲಿ ಮಂಚೂಣಿಯಲ್ಲಿ ಇಟ್ಟಿರುವುದರ ಮೂಲಕ ನೀವು ಕೃಷಿ ಸಂಸ್ಕೃತಿಗೆ ಮಹತ್ವವನ್ನು ನೀಡಿದ್ದೀರಿ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಕಯ್ಯಾರ ಕಿಞ್ಞಣ್ಣ ರೈ, ಪ್ರಭಾಕರ ಜೋಶಿ, ವರದರಾಜ ಪೈ, ಜಬ್ಬಾರ್ ಸಾಮೋ, ಮೊದಲಾದವರು ಕನ್ನಡ ಸಾಹಿತ್ಯ, ಕಲೆ, ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಉಲ್ಲೇಖಿಸಿದರು. ಪುರಾಣದ ಭಗವದ್ಗೀತೆಯಲ್ಲಿ ಉಲ್ಲೇಖಿಸಿದ ಕರ್ಮಣ್ಯೇ ವಾಧಿಕಾರಸ್ತೇ ಹಾಗೂ ಇತಿಹಾಸದ ಬಸವಣ್ಣರವರು ಹೇಳಿದ ಕಾಯಕವೇ ಕೈಲಾಸ, ಇವತ್ತು ವರ್ತಮಾನದಲ್ಲಿ ಅದು ವರ್ಕ್ ಐಸ್ ವರ್ಶಿಪ್ ಆಗಿದೆ, ಈ ಮೂರೂ ಮೂಲಭೂತ ತತ್ವಗಳು ಒಂದೇ ಆಗಿದೆ, ಭವಿಷ್ಯದಲ್ಲಿಯೂ ಕೂಡಾ ಅದು ಅದೇ ಅರ್ಥದಲ್ಲಿ ಇರಲಿದೆ ಎಂದು ಹೇಳಿದರು. ಇಂದಿನ ವಿದ್ಯಾರ್ಥಿಗಳು ತಮ್ಮ ಮಾತೃ ಸಂಸ್ಕೃತಿಯೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು, ಭಾಷಾ ಶುದ್ಧತೆ ಮತ್ತು ಬರವಣಿಗೆ ಶಕ್ತಿಯನ್ನು ಹೆಚ್ಚಿಸಬೇಕು, ತಾಂತ್ರಿಕತೆಯ ಮೇಲಿನ ಅತಿಯಾದ ಅವಲಂಬನೆಯು ಜಡತ್ವವನ್ನು ಸೃಷ್ಠಿಸುತ್ತದೆ, ಆದ್ದರಿಂದ ನಿಮ್ಮ ಜ್ಞಾನವನ್ನು ಇಂದಿಗೂ ಹರಾಜಿಗೆ ಹಾಕಬೇಡಿ, ಸ್ವಂತ ಉದ್ದಿಮೆಯನ್ನು ಪ್ರಾರಂಭಿಸುವುದರ ಮೂಲಕ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು, ಮೊಬೈಲ್ ಪ್ರಪಂಚದಿಂದ ಹೊರಗೆ ಬಂದು ಸುಂದರವಾಗಿರುವ ನೈಜ ಪ್ರಪಂಚವನ್ನು ಸುತ್ತಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ಭವ್ಯವಾದ ಶ್ರೀನಿವಾಸ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಸನ್ಮಾನ್ಯ ಡಾ. ಸಿಎ ರಾಘವೇಂದ್ರ ರಾಯರು ಮಾಡಿರುವುದು ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಬಲುದೊಡ್ಡ ಕೊಡುಗೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಮುಖ್ಯ ಅತಿಥಿಗಳಾದ ಶ್ರೀ ಅಗರಿ ರಾಘವೇಂದ್ರ ರಾವ್ ರವರು ಮಾತನಾಡಿ, ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಕನ್ನಡ ಸುಂದರವಾದ ಭಾಷೆ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿದ ಭಾಷೆ ಕನ್ನಡ. ಕರುನಾಡಿನ ಯಕ್ಷಗಾನದ ದೇವಿ ಮಹಾತ್ಮೆ ಪ್ರಸಂಗವು ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರಯೋಗದ ಮೂಲಕ ಗಿನ್ನೆಸ್ ದಾಖಲೆಯನ್ನು ಮಾಡಿದೆ. ಕನ್ನಡ ಭಾಷೆಯನ್ನು ಕಟ್ಟಿ, ಬೆಳೆಸಿದ ಸಾಧಕರನ್ನು ನಾವು ಸದಾ ಸ್ಮರಿಸಬೇಕು. ಆಂಗ್ಲ ಭಾಷಾ ಮಾಧ್ಯಮದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಇಷ್ಟು ಅದ್ದೂರಿಯಾಗಿ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ, ಇಂದು ಮುಕ್ಕದಲ್ಲಿ, ಶ್ರೀನಿವಾಸ ವಿಶ್ವವಿದ್ಯಾಲಯವು ಕನ್ನಡ ಕ್ರಾಂತಿಯನ್ನೇ ಮಾಡಿದೆ. ಕನ್ನಡ ಭಾಷೆಯನ್ನು ಮತ್ತಷ್ಟು ಸಧೃಡಗೊಳಿಸುವ ಕೆಲಸವನ್ನು ಇಂದಿನ ಯುವಪೀಳಿಗೆಯು ಮಾಡಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ಸಾಧಿಸಿದ ಶಕ್ತಿಯೇ ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ. ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕಮದಲ್ಲಿ ಭಾಗವಹಿಸಿ, ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು, ಪ್ರತಿಯೋರ್ವರ ಮನೆಯಲ್ಲಿ ಹಾಗೂ ಮನದಲ್ಲಿ ಕನ್ನಡ ಅಭಿಮಾನ ಬೆಳಗಲಿ, ಇಂತಹ ಕಾರ್ಯಕ್ರಮಗಳು ಈ ವಿದ್ಯಾಸಂಸ್ಥೆಯಲ್ಲಿ ನಿರಂತರವಾಗಿ ಆಯೋಜಿಸಲ್ಪಡುವಂತಾಗಲಿ ಎಂದು ಹೇಳಿ ಶುಭವನ್ನು ಹಾರೈಸಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಕಾಲೇಜಿನ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ ರವರು ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಶ್ರೀಮಂತ ಇತಿಹಾಸ ಇರುವ ಕನ್ನಡ ಭಾಷೆಯ ಕುರಿತು ಮಾಹಿತಿಯನ್ನು ನೀಡಿದರು. ಎಸ್ ಎಲ್ ಭೈರಪ್ಪ, ತಾ ರಾ ಸುಬ್ಬ ರಾವ್, ಸಾ ಶಿ ಮರುಳಯ್ಯ, ಬರಗೂರು ರಾಮಚಂದ್ರಪ್ಪ, ಕುವೆಂಪು, ಕೋಟ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಮುಗೂರು ಮಲ್ಲಪ್ಪ, ಮಳವಳ್ಳಿ ಮಹಾದೇವಸ್ವಾಮಿ ಮೊದಲಾದ ಹಿರಿಯ ಸಾಹಿತಿಗಳು ಕನ್ನಡ ಭಾಷೆಗೆ ನೀಡಿದ ಕೊಡುಗೆಯನ್ನು ನೆನೆಪಿಸಿದರು. ಪಂಪ, ರನ್ನ, ಬಸವಣ್ಣ ಹಾಗೂ ಇನ್ನಿತರ ಶ್ರೇಷ್ಠ ಮಹನೀಯರನ್ನು ಹಾಗೂ ದಾರ್ಶನಿಕರನ್ನು ನೆನಪಿಸಿಕೊಂಡ ಅವರು ಕರುಳಿನ ಭಾಷೆ ಕನ್ನಡದ ಸೊಗಡು ಮತ್ತು ಪ್ರಾಮುಖ್ಯತೆ ಕುರಿತು ಮಾತನಾಡಿದರು. ಪಿತೃ ಋಣ, ಮಾತೃ ಋಣ, ಸಮಾಜ ಋಣ, ಈ ನೆಲದ ಋಣ ಅತೀ ಮುಖ್ಯವಾದುದು. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ ಮತ್ತು ಜಾನಪದ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಮೆರುಗನ್ನು ಹೊಂದಿರುವ ಕರುನಾಡಿನಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು. ಪಂಪಭಾರತದ ಚತುರ್ಥಾಶ್ವಾಸಂದಲ್ಲಿ ಉಲ್ಲೇಖವಿರುವ “ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ” ವರ್ಣಿಸಿದ ಡಾ. ಥಾಮಸ್ ಪಿಂಟೋ ರವರು ನಮ್ಮ ಭಾಷೆ, ಸಂಸ್ಕೃತಿ, ಕಲೆ, ಆಹಾರ ಪದ್ಧತಿ, ನೆಲ ಮತ್ತು ಕನ್ನಡದ ಅಸ್ಮಿತೆಯನ್ನು ನಾವು ಎಂದೆಂದಿಗೂ ಕಳೆದುಕೊಳ್ಳಬಾರದು, ಕನ್ನಡ ನಮ್ಮ ಅನ್ನದ ಭಾಷೆಯಾಗಬೇಕು ಮತ್ತು ಹೃದಯದ ಭಾಷೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಸ್ವಾಗತ ಭಾಷಣವನ್ನು ಮಾಡಿದರು ಮತ್ತು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಪ್ರೊ. ಶ್ವೇತಾ ಪೈ ಯವರು ವಂದನಾರ್ಪಣೆ ಸಲ್ಲಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಮುಖ್ಯ ಅತಿಥಿಗಳು ಪ್ರದಾನ ಮಾಡಿದರು. ಪ್ರೊ. ವರ್ಷಾ ಬಂಗೇರ ರವರು ವಿಜೇತರ ಮಾಹಿತಿಯನ್ನು ಸಭೆಗೆ ನೀಡಿದರು.
ವಿದ್ಯಾರ್ಥಿನಿ ಕುಮಾರಿ ಸನ್ನಿಧಿ ಶೆಟ್ಟಿ, ಕುಮಾರಿ ಪಲ್ಲವಿ ಮತ್ತು ಶ್ರೀಹರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಮಾರಿ ಮಾಧುರಿ ಆಚಾರ್ಯ ಪ್ರಾರ್ಥನೆ ಮಾಡಿದರು.
ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ, ಸುಮಾರು ಮೂರು ಗಂಟೆಗಳ ಕಾಲ ಕನ್ನಡ ಭಾಷೆ ಮತ್ತು ಗೀತೆಗಳನ್ನು ಆಧರಿಸಿದ ಮನೋರಂಜನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ತದನಂತರ, ಸಂಜೆ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ವ:ಪ್ರೊ. ಶ್ರೀನಾಥ್ ರಾವ್ ಕೆ.