ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ – ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಜಯಾನಂದ ಪೆರಾಜೆ ಆಯ್ಕೆ…
ಬಂಟ್ವಾಳ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಬೆಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಕವಿ, ಸಾಹಿತಿ ಜಯಾನಂದ ಪೆರಾಜೆಯವರನ್ನು ಜಿಲ್ಲಾಧ್ಯಕ್ಷ ಡಾ. ಸುರೇಶ ನೆಗಳಗುಳಿ ಇವರ ಶಿಫಾರಸ್ಸಿನಂತೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ನೇಮಕಗೊಳಿಸಿರುತ್ತಾರೆ.
ಇವರು ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದು, ಜೇಸಿಐ ಸಂಸ್ಥೆಯ ರಾಜ್ಯ ತರಬೇತುದಾರರಾಗಿರುತ್ತಾರೆ. ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ದೆಹಲಿ ಕರ್ನಾಟಕ ಭವನ, ನೇಪಾಳದ ಪೊಕರಾದಲ್ಲಿ ಮತ್ತು ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳು ಪ್ರಕಟವಾಗಿದ್ದು “ಭಾವ ಬಿಂದು” ಕವನ ಸಂಕಲನವನ್ನು ಬಿಡುಗಡೆಗೊಳಿಸಿದ್ದಾರೆ. ಇವರು ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿರುತ್ತಾರೆ. ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿದ್ದು ಹಿರಿಯ ಪತ್ರಕರ್ತರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದು ಪ್ರಸ್ತುತ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುತ್ತಾರೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇವರ ಕ್ರಿಯಾಶೀಲ ವ್ಯಕ್ತಿತ್ವನ್ನು ಗುರುತಿಸಿ ರೋಟರಿ, ಲಯನ್ಸ್, ಜೇಸಿ ಹಾಗೂ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿರುತ್ತಾರೆ.