ಪುತ್ತೂರು ತಾಲೂಕು ಮಟ್ಟದ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮ……
ಪುತ್ತೂರು: ಪರಿಣಾಮಕಾರಿ ಹಾಗೂ ದಕ್ಷವಾಗಿ ಸರಕಾರದ ಸೇವೆಗಳನ್ನು ಪಾರದರ್ಶಕವಾಗಿ ಜನರಿಗೆ ಒದಗಿಸುವುದೇ ಲೋಕಾಯುಕ್ತದ ಉದ್ದೇಶವಾಗಿದ್ದು, ತಮ್ಮ ವಿರುದ್ದ ದೂರು ನೀಡಿದ ಸಾರ್ವಜನಿಕರ ವಿರುದ್ದ ಅಧಿಕಾರಿಗಳು ಧ್ವೇಷ ಸಾಧಿಸಬಾರದು. ಯಾವುದೋ ದುರುದ್ದೇಶದಿಂದಲೂ ಸಾರ್ವಜನಿಕರು ಅದಿಕಾರಿಗಳ ಮೇಲೆ ದೂರು ನೀಡಬಾರದು ಎಂದು ಸಹಾಯಕ ಆಯುಕ್ತ ಕೃಷ್ಣಮೂರ್ತಿ ಹೆಚ್.ಕೆ ಹೇಳಿದರು.
ಕರ್ನಾಟಕ ಲೋಕಾಯುಕ್ತ ಮಂಗಳೂರು ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸಾರ್ವಜನಿಕರ ದೂರುಗಳ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲೋಕಾಯುಕ್ತ ನಿರೀಕ್ಷಕಿ ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕಾಯುಕ್ತ ಉಪ ಅಧೀಕ್ಷಕ ಎಸ್. ವಿಜಯ ಪ್ರಸಾದ್ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು. ಉಪ ಅಧೀಕ್ಷಕಿ ಕಲಾವತಿ, ತಹಶೀಲ್ದಾರ್ ಅನಂತ ಶಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಛೇರಿಯ ನಾಗೇಶ್ ಸ್ವಾಗತಿಸಿ, ವಂದಿಸಿದರು. ತಾಲೂಕಿನ ವಿವಿಧ ಇಲಾಖೆಗಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಂಪರ್ಕ, ಕೊಳೆರೋಗ ಪರಿಹಾರ, ಪಿಂಚಣಿ, 94 ಸಿ ಹಾಗೂ 94ಸಿಸಿ ಸೇರಿದಂತೆ ಒಟ್ಟು 27 ದೂರು ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದೆ. ಈ ಪೈಕಿ 12 ದೂರು ಅರ್ಜಿಗಳಿಗೆ ತಹಶೀಲ್ದಾರ್ ರವರ ಮೂಲಕ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. 9 ಅರ್ಜಿಗಳನ್ನು ಪರಿಹರಿಸಲು ಅರ್ಜಿದಾರರಿಗೆ ಕಾಲಾವಕಾಶ ನೀಡಲಾಯಿತು ಹಾಗೂ 6 ದೂರು ಅರ್ಜಿಗಳನ್ನು ನೋಂದಾಯಿಸಿಕೊಂಡು ಲೋಕಾಯುಕ್ತರಿಗೆ ತನಿಖೆಗೆ ಆದೇಶಕ್ಕೆ ಕಳುಹಿಸಿಕೊಡಲಾಗಿದೆ ಎಂದು ಲೋಕಾಯುಕ್ತ ಉಪ ಅಧೀಕ್ಷಕ ಎಸ್.ವಿಜಯ ಪ್ರಸಾದ್ ತಿಳಿಸಿದರು.