ಯಕ್ಷಾಂಗಣದಿಂದ ತಾಳಮದ್ದಳೆ ಸಪ್ತಾಹಕ್ಕೆ ಸಿದ್ಧತೆ – ನ.19 ರಿಂದ 25ರವರೆಗೆ ‘ಶ್ರೀಹರಿ ಚರಿತ್ರೆ’ ಏಕಾದಶ ಸರಣಿ…

ಮಂಗಳೂರು: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2023’ ಏಕಾದಶ ಸರಣಿ ‘ಹನ್ನೊಂದನೇ ವರ್ಷದ ನುಡಿ ಹಬ್ಬ’ ಇದೇ ನವೆಂಬರ್ 19ರಿಂದ 25 ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಇತ್ತೀಚೆಗೆ ನಗರದ ಖಾಸಗಿ ಹೋಟೆಲಿನಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಸಪ್ತಾಹದಲ್ಲಿ ಏಳು ಜನಪ್ರಿಯ ಪ್ರಸಂಗಗಳ ತಾಳಮದ್ದಳೆ ಮತ್ತು ಗತಿಸಿದ ಹಿರಿಯರ ಸಂಸ್ಮರಣಾ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದರು.

‘ಶ್ರೀಹರಿ ಚರಿತ್ರೆ’ ಪ್ರಸಂಗ ಸರಣಿ:
ಯಕ್ಷಾಂಗಣದ ಆಶ್ರಯದಲ್ಲಿ ‘ಶ್ರೀಹರಿ ಚರಿತ್ರೆ’ ಎಂಬ ಪರಿಕಲ್ಪನೆ ಯೊಂದಿಗೆ ಜರಗುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ನವೆಂಬರ್ 19ನೇ ಭಾನುವಾರ ಉದ್ಘಾಟನೆಗೊಳ್ಳಲಿದ್ದು ಅಂದಿನಿಂದ ಕ್ರಮವಾಗಿ ‘ಧ್ರುವ ಚರಿತ್ರೆ, ರುಕ್ಮಾಂಗದ ಚರಿತ್ರೆ, ಪ್ರಹ್ಲಾದ ಚರಿತ್ರೆ, ಅಂಬರೀಶ ಚರಿತ್ರೆ, ಅಜಾಮಿಳ ಚರಿತ್ರೆ, ಚಂದ್ರಹಾಸ ಚರಿತ್ರೆ’ – ಹೀಗೆ ಆರು ಕನ್ನಡ ಪ್ರಸಂಗಗಳನ್ನು ಸಂಯೋಜಿಸಲಾಗಿದೆ. ದಿನಾಂಕ 25 ರಂದು ಶನಿವಾರ ಸಮಾರೋಪ ಸಮಾರಂಭದ ಅಂಗವಾಗಿ ‘ಕರ್ಣ ಚರಿತ್ರೆ: ಏಕಿನಿ ಕರ್ಣೆ – ದೇವೆರೆಗ್ ಅರ್ಪಣೆ’ ಎಂಬ ತುಳು ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಲಾಗುವುದು. ಸುಮಾರು 75 ಕ್ಕೂ ಹೆಚ್ಚಿನ ಹೆಸರಾಂತ ಯಕ್ಷಗಾನ ಕಲಾವಿದರು ಇದರಲ್ಲಿ ಭಾಗವಹಿಸುವರು.

ದಿ.ಬಿ.ರಾಮ ಕಿರೋಡಿಯನ್ ಶತಮಾನ ಸ್ಮರಣೆ:
ತುಳುನಾಡಿನ ರಂಗಭೂಮಿ, ಸಾಹಿತ್ಯ, ಯಕ್ಷಗಾನಗಳಲ್ಲಿ ದುಡಿದ ತುಳು ನಾಟಕ ಬ್ರಹ್ಮ ದಿ.ಬೋಳೂರು ರಾಮ ಕಿರೋಡಿಯನ್ ಅವರು ಜನಿಸಿ ಪ್ರಸ್ತುತ ನೂರು ವರ್ಷಗಳಾದ ಸಂದರ್ಭದಲ್ಲಿ ಅವರ ಶತಮಾನದ ಸ್ಮರಣೆಯನ್ನು ಯಕ್ಷಾಂಗಣದ ವೇದಿಕೆಯಲ್ಲಿ ನಡೆಸಲಾಗುವುದು. ನವೆಂಬರ್ 25 ರಂದು ಜರಗುವ ಈ ಕಾರ್ಯಕ್ರಮದಲ್ಲಿ ಅವರ ಆಪ್ತರು ಮತ್ತು ಬಂಧು ವರ್ಗದವರು ಭಾಗವಹಿಸುವರು. ಅದಲ್ಲದೆ ಇತರ ದಿನಗಳಲ್ಲಿ ಯಕ್ಷಗಾನಕ್ಕಾಗಿ ದುಡಿದ ಹಿರಿಯ ಚೇತನಗಳ ಸಂಸ್ಮರಣೆಯನ್ನು ಸಾಂದರ್ಭಿಕವಾಗಿ ನಡೆಸಲಾಗುವುದು’ ಎಂದು ಭಾಸ್ಕರ ರೈ ಕುಕ್ಕುವಳ್ಳಿ ನುಡಿದರು.
ಬಳಿಕ ಯಕ್ಷಾಂಗಣದ ಗೌರವಾಧ್ಯಕ್ಷರಾದ ಡಾ.ಎ.ಜೆ.ಶೆಟ್ಟಿ ಅವರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಪ್ರಮುಖರಾದ ಕೆ. ರವೀಂದ್ರ ರೈ ಕಲ್ಲಿಮಾರು, ಕರುಣಾಕರ ಶೆಟ್ಟಿ ಪಣಿಯೂರು, ಉಮೇಶ ಗೇರುಕಟ್ಟೆ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಕೆ.ಲಕ್ಷೀನಾರಾಯಣ ರೈ ಹರೇಕಳ, ನಿವೇದಿತಾ ಎನ್.ಶೆಟ್ಟಿ ಉಪಸ್ಥಿತರಿದ್ದರು.

whatsapp image 2023 11 07 at 12.56.57 pm

Sponsors

Related Articles

Back to top button