ಸಂಪಾಜೆ ಗ್ರಾಮಕ್ಕೆ 40 ಕೋಟಿಗೂ ಮಿಕ್ಕಿ ಅನುದಾನ -ಟಿ.ಎಂ ಶಹೀದ್ ತೆಕ್ಕಿಲ್…
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅನುದಾನದಡಿಯಲ್ಲಿ ಒಂದು ಕೋಟಿ ಯಲ್ಲಿ ನಿರ್ಮಿಸಲಾದ ಸರ್ವ ಋತು ಕಾಂಕ್ರಿಟ್ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಸವಲತ್ತು ವಿತರಣಾ ಸಮಾರಂಭ ನಡೆಯಿತು.
ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಸಂಪಾಜೆ ಗ್ರಾಮದಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಿಂದ 1 ಕೋಟಿ ಅನುದಾನದಲ್ಲಿ ರಸ್ತೆಗಳ ನಿರ್ಮಾಣ, ಸುಮಾರು 15 ಕೋಟಿಗಳ ಪಂಚ ಗ್ಯಾರಂಟಿ ಅನುದಾನ, ನರೇಗಾ ಯೋಜನೆಯಡಿಯಲ್ಲಿ ಸುಮಾರು 15 ಕೋಟಿ ಅನುದಾನ, ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ವಿಶೇಷ ಅನುದಾನದಿಂದ ಹಾಗೂ ಎಂ.ಪಿ ಮತ್ತು ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಕೋಟಿ ಹೀಗೆ ಕಳೆದ ಐದು ವರ್ಷದಲ್ಲಿ 40 ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿಗಳು ಸಂಪಾಜೆ ಗ್ರಾಮದಲ್ಲಿ ಆಗಿರುತ್ತದೆ. ಸಂಪಾಜೆ ಸಂಪತ್ ಭರಿತವಾದ ಗ್ರಾಮವಾಗಿದ್ದು, ಸರ್ವ ಜನಾಂಗಗಳ ಶಾಂತಿಯ ತೋಟ, ಸಂಪಾಜೆಯಲ್ಲಿ ಮುಂದೆಯೂ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಪಕ್ಷ ಜಾತಿ ಮತ ಬೇದ ಇಲ್ಲದೆ ಎಲ್ಲರಿಗೂ ಸಮಬಾಳು ಸಮಪಾಲು ಎಂಬಂತೆ ಕೆಲಸ ಮಾಡುತ್ತೇನೆ . ಇತಿಹಾಸ ಪ್ರಸಿದ್ದವಾದ ಪೇರಡ್ಕ ಮಸೀದಿ ಮತ್ತು ದರ್ಗಾದ ಅಧ್ಯಕ್ಷನಾಗಿ ಪೇರಡ್ಕಕ್ಕೆ ರಸ್ತೆ ಮತ್ತು ಸೇತುವೆ ಮಾಡಿದ್ದೇನೆ. ಪೆರಂಗೋಡಿ-ಪೇರಡ್ಕ ರಸ್ತೆ ಮತ್ತು ಗೂನಡ್ಕ ಪೇರಡ್ಕ ರಸ್ತೆಯನ್ನು ಎಪ್ಪತ್ತು,ಎಂಬತ್ತು ವರ್ಷಗಳ ಹಿಂದೆ ತೆಕ್ಕಿಲ್ ಮೊಹಮ್ಮದ್ ಹಾಜಿಯವರು ಮಾಡಿದನ್ನು ನಾನು ಅಭಿವೃದ್ಧಿ ಪಡಿಸಿ ಮುಂದುವರಿಸಿಕೊಂಡು ಬಂದಿರುತ್ತೇನೆ. ಅಡ್ಯಡ್ಕದಿಂದ ಪೇರಡ್ಕಕ್ಕೆ ನನ್ನ ತಂದೆ ಬಾಬಾ ಹಾಜಿಯವರ ನೇತೃತ್ವದಲ್ಲಿ ಸ್ವಂತವಾಗಿ ರಚಿಸಿದ ರಸ್ತೆಯಾಗಿದ್ದು ಅದನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದರು.ಮುಂದೆ ಸಂಪಾಜೆ ತೋಡಿಕಾನ ಹಾಗು ಅರಂತೋಡಿನಲ್ಲಿ ಹೆಚ್ಚು ಅಭಿವೃದ್ಧಿ ಪಡಿಸುತ್ತೇನೆ ಮತ್ತು ಯಾರಾದರು ಅಭಿವೃದ್ಧಿ ಮಾಡಲು ಮುಂದೆ ಬಂದಲ್ಲಿ ಅವರಿಗೆ ಸಹಕರಿಸುತ್ತೇನೆ ಎಂದು ನಾನು ಜನಪ್ರತಿನಿಧಿ ಅಲ್ಲದಿದ್ದರೂ ಇಷ್ಟೊಂದು ಅಭಿವೃದ್ಧಿ ಮಾಡಲು ಸಾಧ್ಯವಾದದಕ್ಕೆ ಸಂತಸ ಅಭಿಮಾನ ಇದೆ ಗೂನಡ್ಕ ದರ್ಕಾಸ್ ಪೆಲ್ತಡ್ಕ ರಸ್ತೆ ನಲುವತ್ತು ವರ್ಷಗಳ ಬೇಡಿಕೆ ಅಲ್ಲಿಯ ಹಿರಿಯರಾದ ಸತ್ಯನಾರಾಯಣ ಭಟ್ ,ಕೊಪ್ಪತಕಜೆ ಅಬ್ದುಲ್ಲ ಅವರ ಮನವಿಗೆ ಸ್ಪಂದಿಸಿ ಐವತ್ತು ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಸಹಿತ ಐದು ಗುಡ್ಡ ಗಾಡು ಪ್ರದೇಶಕ್ಕೆ ರಸ್ತೆ ನಿರ್ಮಿಸಿ ಕೊಡಲು ಸಾಧ್ಯವಾಯಿತು ಎಂದರು. ಇದಕ್ಕೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸ್ಪೀಕರ್ ಯು ಟಿ ಖಾದರ್ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಅಲ್ಪಸಂಖ್ಯಾತರ ಇಲಾಖೆ ಸಚಿವ ಝಮೀರ್ ಅಹಮದ್ ಖಾನ್ ಅವರ ಸಹಾಯವನ್ನು ಸ್ಮರಿಸಿದರು. ಕಳೆದ ಒಂಬತ್ತು ವರ್ಷಗಳಲ್ಲಿ ಸಂಪಾಜೆಯಲ್ಲಿ ಭೂಕುಸಿತ ಪ್ರಳಯ, ನೆರೆ ಭೂಕಂಪ ಆದಾಗ, ಅಪಘಾತ ಆದಾಗ ಜಿ. ಕೆ ಹಮೀದ್ ಗೂನಡ್ಕ, ಎಸ್ ಕೆ ಹನೀಫ್ ಸಂಪಾಜೆ, ಅಬೂಸಾಲಿ ಗೂನಡ್ಕ ಧರ್ಮಸ್ಥಳ ಗ್ರಾಮಾಭಿವೃದ್ಧಿ , ಎಸ್ ಕೆ ಎಸ್ ಎಸ್ ಎಫ್ ಮತ್ತು ಎಸ್ ಎಸ್ ಎಫ್ ಸಂಘಟನೆಯವರು ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಷ್ಟ ನಷ್ಟ ಅನುಭವಿಸಿದ ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನ ಮುಂದೆಯೂ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಚರ್ಚಿಸಿ ಹೆಚ್ಚು ಅನುದಾನ ತರುತ್ತೇನೆ ಎಂದರು. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ 500 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೃಷಿ ಉಪಕರಣ, ಹೊಲಿಗೆ ಯಂತ್ರಗಳು ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿಮೇಲು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್, ಕರ್ನಾಟಕ ಪರಿಸರ ಪ್ರವಾಸೋಧ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಕರ್ನಾಟಕ ಅರೆಭಾಷಿ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫಾಗ್ಯಾರಂಟಿ ಅನುಷ್ಠಾನದ ಹಮೀದ್ ಕುತ್ತಮಟ್ಟೆ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಓಲ್ಗಾ ಡಿಸೋಜ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಯಾಝ್ ಅಹ್ಮದ್, ಕುಡಿಯುವ ನೀರು ನೈರ್ಮಲ್ಯ ವಿಭಾಗದ ಇಂಜಿನಿಯರ್ ಚೈತ್ರಾ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್.ಕೆ.ಹನೀಫ್ ವಂದಿಸಿದರು. ಶ್ರೀಮತಿ ಕಾಂತಿ ಮತ್ತು ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.




