ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಅಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರ…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗ, ಐಕ್ಯುಎಸಿ, ಐಐಸಿ ಮತ್ತು ಐಇಇಇ ವಿದ್ಯಾರ್ಥಿ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಲ್ಯಾಟೆಕ್ಸ್ ಬಳಕೆಯ ಬಗ್ಗೆ 3 ದಿನಗಳ ಅಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರವು ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆಯಿತು. ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಅತ್ಯುನ್ನತ ಕೌಶಲಗಳೊಂದಿಗೆ ಅಧ್ಯಾಪಕರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಪ್ರತಿಯೊಬ್ಬ ಅಧ್ಯಾಪಕನಿಗೂ ದಿನ ದಿನವೂ ಹೊಸ ಹೊಸ ವಿಷಯಗಳನ್ನು ಕಲಿಯುವುದು ಅನಿವಾರ್ಯ. ವಿದ್ಯಾರ್ಥಿಯ ಜ್ಞಾನ ದಾಹವನ್ನು ತಣಿಸುವ ಮಟ್ಟಿಗೆ ಅಧ್ಯಾಪಕನು ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸ ವಿಷಯಗಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಅಧ್ಯಾಪಕರಿಗೆ ಸಂಶೋಧನೆ ಅಗತ್ಯ. ಸಮಾಜದಲ್ಲಿ ಗುಣಾತ್ಮಕ ಬೆಳವಣಿಗೆಗೆ ಸಹಕಾರಿಯಾಗುವ ಈ ಸಂಶೊಧನಾ ಪ್ರಬಂಧಗಳನ್ನು ಬರೆಯುವುದಕ್ಕೆ ಲ್ಯಾಟೆಕ್ಸ್ ಸಹಕಾರಿಯಾಗಿದ್ದು, ಇದರ ಬಳಕೆಯನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಿರಂತರ ಕಲಿಕೆಯ ಮೂಲಕ ತಮ್ಮ ವೃತ್ತಿಪರ ಅಭಿವೃದ್ದಿಯ ಬಗೆಗೆ ಅಧ್ಯಾಪಕರು ಸದಾ ಉತ್ಸುಕರಾಗಬೇಕು ಎಂದರು.
ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಅನಿರುದ್ದ.ಬಿ.ಜಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಪ್ರೊ.ಸೌಮ್ಯ ಅನಿಲ್ ಹಾಗೂ ಪ್ರೊ.ರಜನಿ ರೈ ಲ್ಯಾಟೆಕ್ಸ್‍ನ ವಿವಿಧ ಅಂಶಗಳ ಕುರಿತಂತೆ ಪ್ರಾಯೋಗಿಕ ತರಬೇತಿಯನ್ನು ನೀಡಿದರು.
ಕಾರ್ಯಕ್ರಮ ಸಂಯೋಜಕಿ ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜ್ಯೋತಿಮಣಿ ಸ್ವಾಗತಿಸಿ, ಡಾ.ರಾಜೇಶ್ವರಿ.ಎಂ ವಂದಿಸಿದರು. ಪ್ರೊ.ಪೂಜಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.






