ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ತಾಂತ್ರಿಕ ಹಾಗೂ ಸಾಹಿತ್ಯಿಕ ಪ್ರತಿಭೆಗಳ ಅನಾವರಣ ಕಾರ್ಯಕ್ರಮ “ಚತುರಂ”…
ಪುತ್ತೂರು: ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯಗಳಲ್ಲಿ ಪರಿಣತರೇ ಆಗಿರುತ್ತಾರೆ. ಸೂಕ್ತ ಅವಕಾಶಗಳು ಹಾಗೂ ಸರಿಯಾದ ವೇದಿಕೆಗಳು ಸಿಕ್ಕಿದಾಗ ಅವರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಚತುರಂ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದೆ ಎಂದು ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರಕಾಶ್ ಕುಮಾರ್.ಪಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಇಇಇ ವಿದ್ಯಾರ್ಥಿ ವಿಭಾಗ ಇದರ ಆಶ್ರಯದಲ್ಲಿ ನಡೆದ ತಾಂತ್ರಿಕ ಹಾಗೂ ಸಾಹಿತ್ಯಿಕ ಪ್ರತಿಭೆಗಳ ಅನಾವರಣ ಕಾರ್ಯಕ್ರಮ ಚತುರಂ ಗೆ ಚಾಲನೆ ನೀಡಿ ಮಾತಾಡಿದರು. ಎಷ್ಟೋ ವಿದ್ಯಾರ್ಥಿಗಳು ತಮ್ಮಲ್ಲಿ ಪ್ರತಿಭೆಗಳಿದ್ದರೂ ಹಿಂಜರಿಕೆಯಿಂದ ಹಿಂದುಳಿಯುತ್ತಾರೆ ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸಗಳು ನಿರಂತರ ನಡೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದು ಗುರಿಯಿರಬೇಕು, ನಮ್ಮ ಶಕ್ತಿ ವಿಶೇಷಗಳನ್ನು ಮತ್ತು ಧಾರಣಾ ಸಾಮರ್ಥ್ಯವನ್ನು ಕಂಡುಕೊಂಡ ಮೇಲೆ ಈ ಗುರಿಯನ್ನು ನಿರ್ಧರಿಸಬೇಕು. ಇಲ್ಲವಾದರೆ ಗುರಿ ತಲಪುವುದು ಅಸಾಧ್ಯವಾಗಬಹುದು ಎಂದರು. ನಮ್ಮ ವೈಯಕ್ತಿಕ ಬದುಕಿನ ಜೊತೆಗೆ ರಾಷ್ಟ್ರ ಪರವಾದ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಕಂಪ್ಯೂಟರ್ ಸೈನ್ಸ್ ವಿಭಾಗವೆನ್ನುವುದು ಅವಕಾಶಗಳ ಆಗರ. ಇಲ್ಲಿ ಕಲಿಕೆಗೆ ಸಾಕಷ್ಟು ವಿಷಯಗಳಿವೆ. ಒಳಿತು ಕೆಡುಕುಗಳನ್ನು ನಿರ್ಧರಿಸಿ ಕಲಿತರೆ ಸಮಾಜದಲ್ಲಿ ಶ್ರೇಷ್ಟ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬಹುದು ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ.ನಿಶ್ಚಯ್ ಕುಮಾರ್ ಹೆಗ್ಡೆ, ಮತ್ತು ಕಾರ್ಯಕ್ರಮ ಸಂಯೋಜಕ ಪ್ರೊ.ಪ್ರಮೋದ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕ ಲತೇಶ್.ಎನ್.ಎಸ್ ಸ್ವಾಗತಿಸಿ, ಕಾರ್ಯದರ್ಶಿ ಶಶಾಂಕ್ ರಾವ್.ಪಿ ವಂದಿಸಿದರು. ನಿತ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.