‘ಶೈಕ್ಷಣಿಕ ಉತ್ಕೃಷ್ಟತೆಗಾಗಿ ಅಂತರ್ಜಾಲ ಸಂಪನ್ಮೂಲಗಳು’ -ತರಬೇತಿ ಕಾರ್ಯಕ್ರಮ…..

ಪುತ್ತೂರು: ಗ್ರಂಥಾಲಯಗಳು ವ್ಯಕ್ತಿಯೊಬ್ಬನ ಜ್ಞಾನದಾಹವನ್ನು ತಣಿಸುವ ಮತ್ತು ಬುದ್ದಿಮತ್ತೆಯನ್ನು ವಿಕಸಿಸುವ ಕೇಂದ್ರಗಳು, ಅವುಗಳನ್ನು ಪೂರ್ಣವಾಗಿ ಸದ್ಬಳಕೆ ಮಾಡಿಕೊಂಡಾಗ ಅಗಾಧವಾದ ಜ್ಞಾನವನ್ನು ಪಡೆಯಬಹುದು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದ ಸಂಚಾಲಕ ರಘುರಾಜ್ ಉಬರಡ್ಕ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಇ-ಕನ್ಸೋರ್ಟಿಯಮ್ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ಜರಗಿದ ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ‘ಶೈಕ್ಷಣಿಕ ಉತ್ಕೃಷ್ಟತೆಗಾಗಿ ಅಂತರ್ಜಾಲ ಸಂಪನ್ಮೂಲಗಳು’ ಎನ್ನುವ ವಿಷಯದ ಒಂದು ದಿನದ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಜಾಲತಾಣದಲ್ಲಿ ಪುಸ್ತಕಗಳ ಭಂಡಾರವೇ ಲಭ್ಯವಿದೆ, ಬೇಕಾದಾಗ ಬೇಕಾದ ಸ್ಥಳದಲ್ಲಿ ಇದನ್ನು ಸುಲಭವಾಗಿ ಬಳಸಬಹುದಾದ್ದರಿಂದ ಇದು ಹೆಚ್ಚು ಜನಪ್ರಿಯವಾಗಿದೆಯಾದರೂ ಗ್ರಂಥಾಲಯದ ಪ್ರಶಾಂತ ವಾತಾವರಣದಲ್ಲಿ ಓದುವಾಗ ಸಿಗುವ ಆನಂದ ಅವರ್ಣನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ ಕಲ್ಲಾಜೆ ಮಾತನಾಡಿ ಗ್ರಂಥಾಲಯಗಳಲ್ಲಿ ಎಲ್ಲಾ ವಿಷಯಗಳ ಪುಸ್ತಕಗಳು ಲಭ್ಯವಿರುವುದಿಲ್ಲ. ಇದರಿಂದ ಸಂಶೋಧಕರು, ವಿಧ್ಯಾರ್ಥಿಗಳು ಹೆಚ್ಚಾಗಿ ಜಾಲತಾಣಗಳನ್ನು ಅವಲಂಬಿಸಿರುತ್ತಾರೆ. ಪ್ರಸಕ್ತ ಸನ್ನಿವೇಶಕ್ಕೆ ತಕ್ಕುದಾದ ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ಅನುಭವವನ್ನ್ನು ಗಳಿಸಿಕೊಳ್ಳಬಹುದು ಎಂದರು
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ್ಜಾಲ ಒಕ್ಕೂಟದಲ್ಲಿ ನೋಂದಾಯಿಸಿಕೊಂಡಿರುವ ಪ್ರಕಾಶನ ಸಂಸ್ಥೆಗಳಾದ ಸೈನ್ಸ್‍ಡೈರೆಕ್ಟ್, ಸ್ಪ್ರಿಂಗರ್, ಟೇಲರ್ ಎಂಡ್ ಫ್ರಾನ್ಸಿಸ್, ಎಮರಾಲ್ಡ್, ಐಸಿಇ, ಸೆಂಟೆಂಶಿಯಾ, ನ್ಯೂಏಜ್, ಟರ್ನಿಟ್ ಇದರ ಪ್ರತಿನಿಧಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮಂಗಳೂರು ವಿಭಾಗದ ಇಂಜಿನಿಯರಿಂಗ್ ಕಾಲೇಜುಗಳ ಗ್ರಂಥಪಾಲಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ಕಾಲೇಜುಗಳ ಗ್ರಂಥಪಾಲಕರು, ಸಂಶೋಧನಾನಿರತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
ಕಾಲೇಜಿನ ಗ್ರಂಥಪಾಲಕ ದಿನೇಶ್ ಗೌಡ ಪಿ ಸ್ವಾಗತಿಸಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ಹರಿವಿನೋದ್ ವಂದಿಸಿದರು. ಪ್ರೊ.ಸಂಗೀತಾ ಬಿ ಎಲ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button