ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು -ಎಂಬಿಎ, ಎಂಸಿಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ…
ಪುತ್ತೂರು: ಪ್ರಸಕ್ತ ಸನ್ನಿವೇಶದಲ್ಲಿ ಕಾರ್ಯಕ್ಷೇತ್ರ ನಮ್ಮತ್ತ ಎಸೆಯುವ ಸವಾಲುಗಳನ್ನು ಎದುರಿಸಲು ನಮಗೆ ಅಪಾರವಾದ ಶಕ್ತಿ ಹಾಗೂ ಅಗಾಧವಾದ ತಾಳ್ಮೆ ಬೇಕಾಗುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬಹುದು ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಆ. 1 ರಂದು ನಡೆದ ಕಾಲೇಜಿನ ಎಂಬಿಎ ಮತ್ತು ಎಂಸಿಎ ವಿಭಾಗದ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಜೀವನದ ಹೊಸ ಹಂತವನ್ನು ಆತ್ಮವಿಶ್ವಾಸ ಮತ್ತು ಸಮರ್ಪಣಾ ಮನೋಭಾವದಿಂದ ಪ್ರವೇಶಿಸಬೇಕು ಎಂದರು. ನಮ್ಮ ಏಳಿಗೆಗಾಗಿ ಅಪಾರ ತ್ಯಾಗವನ್ನು ಮಾಡುವ ಹೆತ್ತವರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಸಮಾಜದಲ್ಲಿ ಸಕ್ರಿಯವಾಗಿರಬೇಕಾದರೆ ದಿನೇ ದಿನೇ ವೃದ್ಧಿಯಾಗುತ್ತಿರುವ ನೂತನ ತಂತ್ರಜ್ಞಾನಗಳನ್ನು ಮತ್ತು ವೃತ್ತಿ ಕೌಶಲಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಜೀವನದಲ್ಲಿ ಭಾವನಾತ್ಮಕ ಬುದ್ದಿವಂತಿಕೆಯು ಅವಶ್ಯವಾಗಿದ್ದು ಇದು ಭವಿಷ್ಯದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದರು. ಮುಂದಿನ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ದೇಶದ ಸತ್ಪ್ರಜೆಗಳಾಗುವಂತೆ ಅವರು ಶುಭ ಹಾರೈಸಿದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್, ಪ್ರವೇಶ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ಎಂಬಿಎ ವಿಭಾಗ ಮುಖ್ಯಸ್ಥ ಡಾ.ರಾಬಿನ್ ಮನೋಹರ್ ಶಿಂಧೆ ಮತ್ತು ಎಂಸಿಎ ವಿಭಾಗದ ಪ್ರಭಾರ ನಿರ್ದೇಶಕ ಪ್ರೊ.ಅನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಡಾ.ರಾಬಿನ್ ಮನೋಹರ್ ಶಿಂಧೆ ಸ್ವಾಗತಿಸಿ, ಪ್ರೊ.ಅನಿಲ್ ಕುಮಾರ್ ವಂದಿಸಿದರು. ಸ್ವಸ್ತಿಕಾ ಮತ್ತು ವಿಖ್ಯಾ ಕಾರ್ಯಕ್ರಮ ನಿರ್ವಹಿಸಿದರು.