ಕಲ್ಲಡ್ಕ – ಮಹಮ್ಮಾಯಿ ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ…
ಬಂಟ್ವಾಳ:ಧಾರ್ಮಿಕ ಕಾರ್ಯಕ್ರಮಗಳಿಂದ ಧರ್ಮ ಜಾಗೃತಿ ಉಂಟಾಗುತ್ತದೆ. ನಿತ್ಯ ದೇವರ ಸ್ಮರಣೆ ಮಾಡಿ ಯಾವುದೇ ಕಾರ್ಯಗಳನ್ನು ಮಾಡಿದಾಗ ದೇವತಾನುಗ್ರಹ ಲಭಿಸುತ್ತದೆ ಎಂದು ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಕಲ್ಲಡ್ಕದ ಕುದ್ರೆಬೆಟ್ಟುವಿನಲ್ಲಿ ಶ್ರೀ ಮಹಮ್ಮಾಯಿ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ಧರ್ಮ ಚಾವಡಿಯ ಗೃಹಪ್ರವೇಶ ಪುನರ್ ಪ್ರತಿಷ್ಟಾಭಿಷೇಕ ಹಾಗೂ ಶೀ ದೈವಗಳ ನೇಮೋತ್ಸವ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ನಮ್ಮ ಪರಂಪರೆ , ನಂಬಿಕೆ ಉಳಿಸುವ ಕೆಲಸವನ್ನು ಶ್ರದ್ಧಾಕೇಂದ್ರಗಳು ಮಾಡುತ್ತಿವೆ. ಕ್ಷೇತ್ರಗಳ ಜೀರ್ಣೋದ್ಧಾರದಿಂದ ಧರ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಗುತ್ತು , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಮಾಜಿ ಶಾಸಕ ಕೆ. ಪದ್ಮಾನಭ ಕೊಟ್ಟಾರಿ , ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ, ಕ್ಷೇತ್ರ ಜಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ , ಮಹಾಬಲ ಕಲ್ಲಡ್ಕ, ಕೋಶಾಧಿಕಾರಿ ಲೋಕಾನಂದ ಏಳ್ತಿಮಾರು ಮೊದಲಾದವರು ಉಪಸ್ಥಿತರಿದ್ದರು.