ಬಡ ಕುಟುಂಬಕ್ಕೆ ಆಸರೆಯಾದ ಪುತ್ತೂರಿನ ಟೀಂ ನರೇಂದ್ರ ಸೇವಾ ಸಂಸ್ಥೆ – ಮನೆ ಹಸ್ತಾಂತರ ….
ಪುತ್ತೂರು: ಟೀಂ ನರೇಂದ್ರ ಸೇವಾ ಸಂಸ್ಥೆ ಪುತ್ತೂರು ತಂಡವು ಸೂರಿಲ್ಲದ ಕುಟುಂಬವೊಂದಕ್ಕೆ ದಾನಿಗಳ ಸಹಕಾರದಿಂದ ನಿರ್ಮಿಸಿದ ಮನೆಯ ಹಸ್ತಾಂತರ, ಗೃಹ ಪ್ರವೇಶ ಅ.30 ರಂದು ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ದೀಪ ಬೆಳಗಿಸುವುದರ ಮೂಲಕ ಹಸ್ತಾಂತರಿಸಲ್ಪಟ್ಟ ಹೊಸಮನೆಯಲ್ಲಿ ಟೀಂ ನರೇಂದ್ರದ ಖಜಾಂಜಿ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯರು ಪೌರೋಹಿತ್ಯದಲ್ಲಿ ಗಣಪತಿ ಹವನ, ಸತ್ಯನಾರಾಯಣ ಪೂಜೆಯ ಮೂಲಕ ಶಾಸ್ತ್ರೋಕ್ತ ಗೃಹ ಪ್ರವೇಶ ಕಾರ್ಯಕ್ರಮ ಉಚಿತವಾಗಿ ನೆರವೇರಿಸಿದರು.
ನಾಲ್ಕು ಹೆಣ್ಣುಮಕ್ಕಳು ಮತ್ತು ಓರ್ವ ಪುತ್ರನನ್ನು ಹೊಂದಿರುವ ವಿಟ್ಲ ಸಮೀಪದ ಪೆರುವಾಯಿಯ ಐತ್ತಪ್ಪ ನಾಯ್ಕ್ ದಂಪತಿಗಳದ್ದು ಪುಟ್ಟ ಡೇರೆಯೊಳಗೆ ವಾಸ. ಬಯಲಿನಲ್ಲೇ ಶೌಚ, ಸ್ನಾನಕ್ಕೆ ಮನೆ ಪಕ್ಕದ ತೋಡಿನ ಆಶ್ರಯ. ಇಂತಹ ಪರಿಸ್ಥಿತಿಯಲ್ಲಿದ್ದ ಬಡ ಕುಟುಂಬಕ್ಕೆ ಕೂಲಿ ಕೆಲಸದ ಮೂಲಕ ಏಕಮಾತ್ರ ಆಧಾರವಾಗಿದ್ದ ಮಗ ಮರದಿಂದ ಬಿದ್ದು ಸೊಂಟದಿಂದ ಕೆಳಗೆ ನಿಶ್ಯಕ್ತಿಯಿಂದಾಗಿ ನೆಲ ಬಿಟ್ಟು ಮೇಲೇಳಲಾಗದ್ದು ಮತ್ತೊಂದು ಆಘಾತ. ಇವರ ಮನಕಲಕುವ ಘಟನೆಯನ್ನು ತಿಳಿದು ನೆರವಾಗಲು ಮುಂದಾದದ್ದು ಪುತ್ತೂರಿನ ಟೀಂ ನರೇಂದ್ರ ತಂಡ. ಸಮಾಜ ಸೇವೆಯ ಮೂಲಕ ರಾಷ್ಟಕಟ್ಟುವ ಧ್ಯೇಯವನ್ನು ಅಳವಡಿಸಿಕೊಂಡು ರಚನೆಯಾದ ಟೀಂ ನರೇಂದ್ರ ತಂಡದ ಅಧ್ಯಕ್ಷರಾದ ಸಂತೋಷ್ ಕುಮಾರ್ ವಾಗ್ಲೆ ಅವರ ನೇತೃತ್ವದ ಪದಾಧಿಕಾರಿಗಳ ತಂಡವು ದಾನಿಗಳ ಸಹಕಾರದಿಂದ ಕಟ್ಟಿದ ಸುಸಜ್ಜಿತವಾದ ಮನೆಯು ಇದೀಗ ಗೃಹ ಪ್ರವೇಶವನ್ನೂ ಮುಗಿಸಿ ಕುಟುಂಬದ ಸದಸ್ಯರ ವಾಸಕ್ಕೆ ಲಭ್ಯವಾಗಿದೆ.
ಟೀಂ ನರೇಂದ್ರ ತಂಡದ ಸೇವಾಕಾರ್ಯವನ್ನು ತಿಳಿದ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಸ್ಥಳಕ್ಕಾಗಮಿಸಿ ಯುವಕರ ಕಾರ್ಯವನ್ನು ಶ್ಲಾಘಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಚಣಿಲ ತಿಮ್ಮಪ್ಪ ಶೆಟ್ಟಿ, ದಾನಿಗಳಾದ ರವೀಂದ್ರ (ದೇವ ಟ್ರೇಡರ್ಸ್ ಪುತ್ತೂರು), ಡಾ. ಅಡಿಗ, ಡಾ ಭಾಸ್ಕರ ರಾವ್, ಟೀಮ್ ನರೇಂದ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ವಾಗ್ಲೆ, ಕಾರ್ಯದರ್ಶಿ ಡಾ. ಸುರೇಶ್ ಪುತ್ತೂರಾಯ, ಕಾರ್ಯಕರ್ತರಾದ ಸುರೇಶ್ ಕಲ್ಲಾರೆ, ಜಿ. ಕೃಷ್ಣ, ಮನೋಜ್ ಪಡ್ಡಾಯೂರು, ಅಶ್ವತ್ಥ್ ಮೊದಲಾದವರು ಉಪಸ್ಥಿತರಿದ್ದರು.