ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ – ಧಾರ್ಮಿಕ ಸತ್ಸಂಗ…
ಸಗಣೋಪಾಸನೆಗೆ ಪುರಾಣಗಳೇ ಆಧಾರ: ಭಾಸ್ಕರ ರೈ ಕುಕ್ಕುವಳ್ಳಿ...
ಮಂಗಳೂರು: ‘ಸನಾತನ ಭಾರತೀಯತೆಯ ಆತ್ಮ ನಮ್ಮ ಪುರಾಣಗಳು. ಬಹುತೇಕ ದೇವ – ದೇವಿಯರ ಮಹಿಮೆಗಳನ್ನು ತಿಳಿಯಲು ನಾವು ಆಶ್ರಯಿಸುವುದು ಅವುಗಳನ್ನೇ. ಸಗುಣೋಪಾಸನೆಗೆ ಆಧಾರವಾಗಿರುವ ಪುರಾಣ ಕಥನಗಳ ಮೂಲಕ ನಮ್ಮಲ್ಲಿ ಭಕ್ತಿ ಪಂಥ ಬೆಳೆದು ಬಂದಿದೆ. ಇದರಿಂದಾಗಿಯೇ ವಿವಿಧ ರೂಪಗಳಲ್ಲಿ ದೇವರನ್ನು ಕಲ್ಪಿಸಿಕೊಂಡು ಪ್ರತಿಮಾ ಮಾಧ್ಯಮದಲ್ಲಿ ಆರಾಧಿಸುವ ಸಂಪ್ರದಾಯವನ್ನು ಎಲ್ಲೆಡೆ ಕಾಣುವಂತಾಗಿದೆ’ ಎಂದು ಖ್ಯಾತ ಅರ್ಥಧಾರಿ ಮತ್ತು ಧಾರ್ಮಿಕ ಚಿಂತಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಜರಗಿದ ಧಾರ್ಮಿಕ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ‘ಪುರಾಣಗಳಲ್ಲಿ ಶಿವಾರಾಧನೆ’ ಎಂಬ ವಿಷಯದ ಕುರಿತು ಅವರು ಧಾರ್ಮಿಕ ಉಪನ್ಯಾಸ ನೀಡಿದರು.
‘ಶಿವ ಸದಾ ಮಂಗಳ ಸ್ವರೂಪ; ಪ್ರಕೃತಿ ತತ್ವದ ಪ್ರತೀಕ. ಶಿವಶಕ್ತಿಗಳ ಸಮ್ಮಿಲನದಿಂದಲೇ ಜಗತ್ತಿನ ಎಲ್ಲಾ ವಿದ್ಯಮಾನಗಳು ಸಂಭವಿಸುತ್ತವೆ ಎಂಬುದಕ್ಕೆ ಪುರಾಣಗಳಲ್ಲಿ ಹಲವು ಕಥೆಗಳಿವೆ’ ಎಂದವರು ಉದಾಹರಣೆಗಳ ಮೂಲಕ ಪ್ರತಿಪಾದಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕ್ಷೇಮಾಭ್ಯುದಯ ಸಮಿತಿ ಅಧ್ಯಕ್ಷ ದೇವೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಅರ್ಚಕ ಗಜಾನನ ಭಟ್ ದೀಪ ಪ್ರಜ್ವಲನೆ ಮಾಡಿದರು.
ಸಾಧಕರಿಗೆ ಸಮ್ಮಾನ:
ಸಭೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಹಿರಿಯ ಸಾಧಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಕೃಷಿಕ ಸೇವಾ ಬಂಧು ಹರ್ಬರ್ಟ್ ಡಿ’ಸೋಜಾ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಅಭಿನಂದನಾ ಭಾಷಣ ಮಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕ್ಷೇಮಾಭ್ಯುದಯ ಸಮಿತಿ ಉಪಾಧ್ಯಕ್ಷರಾದ ಎ.ಕೃಷ್ಣಮೂರ್ತಿ ಎಫ್.ಸಿಎ, ಮೋಹನ್ ನೆಕ್ಕರೆ ಮಾರ್ ಹಾಗೂ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್ ವೇದಿಕೆಯಲ್ಲಿದ್ದರು.
ದೇವಸ್ಥಾನದ ಕ್ಷೇಮಾಮಾಭ್ಯುದಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರೋಶನ್ ನೆಕ್ಕರೆ ಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸಮಿತಿ ಸಂಚಾಲಕ ನಾಗೇಶ್ ಕಲ್ಲೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೋಶಾಧಿಕಾರಿ ಎಂ. ರಾಮ್ ಗಣೇಶ್ ದಂಬೆ, ಜೊತೆ ಕಾರ್ಯದರ್ಶಿಗಳಾದ ಕೆ.ಗುಣಾರಾಜ್, ಎಂ.ಅರುಣ್ ಕುಮಾರ್, ಸದಸ್ಯರಾದ ಶಶಿಕಲಾ ಬಾಲಕೃಷ್ಣನ್, ಮೋಹನ್ ಯು. ಎಸ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಜರಗಿತು.