ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಐ2 ಕನೆಕ್ಟ್-2024 ಪ್ರಾಜೆಕ್ಟ್ ಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ…

ಪುತ್ತೂರು: ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳು ಕ್ಷಣ ಕ್ಷಣಕ್ಕೂ ಬದಲಾವಣೆಯಾಗುತ್ತಿವೆ. ಅದು ಪಠ್ಯಕ್ರಮದಲ್ಲಿ ಸೇರ್ಪಡೆಗೊಂಡು ವಿದ್ಯಾರ್ಥಿಗಳನ್ನು ತಲಪುವುದು ತಡವಾಗುತ್ತದೆ. ಆದರೆ ಇಂಡಸ್ಟ್ರಿಗಳು ಬದಲಾದ ತಂತ್ರಜ್ಞಾನಗಳನ್ನೇ ಬಯಸುತ್ತವೆ. ಈ ಕ್ಷಿಪ್ರ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಪಠ್ಯಕ್ರಮದ ಜತೆಯಲ್ಲಿ ಅನೇಕ ಪೂರಕ ವಿಷಯಗಳನ್ನು ಕಲಿತುಕೊಳ್ಳುವುದು ತುಂಬಾ ಅವಶ್ಯಕ ಎಂದು ಮಂಗಳೂರಿನ ಯುನಿಕೋರ್ಟ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಆಂಟೋನಿಯೋ ಧರ್ಮದಾಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ಐಇಇಇ ಮಂಗಳೂರು ಉಪ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಐಎಸ್‍ಟಿಇ ನವದೆಹಲಿ, ವಿವೇಕಾನಂದ ಸೆಂಟರ್ ಫಾರ್ ರೀಸರ್ಚ್ ಸ್ಟಡೀಸ್, ಇನ್ಸ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ ಹಾಗೂ ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗ ಇದರ ಸಹಭಾಗಿತ್ವದಲ್ಲಿ ನಡೆದ ರಾಜ್ಯಮಟ್ಟದ ಐ2 ಕನೆಕ್ಟ್-2024 ಪ್ರಾಜೆಕ್ಟ್ ಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಂತ್ರಜ್ಞಾನದ ನೆರವು ಸಿಗುವಂತೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಅವರು ಹೇಳಿದರು.
ಇನ್ನೋರ್ವ ಅತಿಥಿ ಐಇಇಇ ಮಂಗಳೂರು ಉಪ ವಿಭಾಗದ ಅಧ್ಯಕ್ಷ ಡಾ.ವಾಸುದೇವ ಆಚಾರ್ಯ ಮಾತನಾಡಿ ಇದೊಂದು ಐಇಇಇ ಮಂಗಳೂರು ಉಪ ವಿಭಾಗದ ಪ್ರಮುಖ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ನವ-ನವೀನ ಯೋಜನೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಐ2 ಕನೆಕ್ಟ್-2024 ಒಂಭತ್ತನೇ ಆವೃತ್ತಿಯಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಹೊಸತನವನ್ನು ಮೈಗೂಡಿಕೊಂಡು ಮುಂದುವರಿಯುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್‍ಪ್ರಸನ್ನ.ಕೆ ಮಾತನಾಡಿ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅನೇಕ ಹೊಸ ವಿಷಯಗಳನ್ನು ಕಲಿಯುವುದಕ್ಕೆ ಅವಕಾಶವಾಗುತ್ತದೆ. ಎಲ್ಲರೂ ಪ್ರಶಸ್ತಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ, ನಿಮ್ಮ ನೂತನ ಯೋಜನೆಗಳು ಜನರ ಮನಸ್ಸನ್ನು ಗೆಲ್ಲುವಂತಾಗಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಟಿ.ಎಸ್.ಸುಬ್ರಮಣ್ಯ ಭಟ್ ಮಾತನಾಡಿ ಆಧುನೀಕರಣಕ್ಕೆ ತಮ್ಮನ್ನು ತಾವು ಜೋಡಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸನ್ನದ್ಧರಾಗಬೇಕು ಎಂದರು. ವಿದ್ಯಾರ್ಥಿಗಳ ಉನ್ನತಿಗೆ ಕಾಲೇಜು ಅನೇಕ ಚಟುವಟಿಕೆಗಳನ್ನು ನಡೆಸುತ್ತಿದೆ ಅದರ ಪೂರ್ಣ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳೂ ಪಡೆದುಕೊಳ್ಳಬೇಕು. ಸಂಸ್ಕಾರಯುತ ಜೀವನವನ್ನು ನಡೆಸುತ್ತಾ ಸಮಾಜಕ್ಕೆ ಹಾಗೂ ದೇಶಕ್ಕೆ ಒಳಿತಾಗುವ ಕಾರ್ಯದಲ್ಲಿ ನಿರತರಾಗಬೇಕು ಎಂದರು.
ಐಇಇಇ ಮಂಗಳೂರು ಉಪ ವಿಭಾಗದ ಕಾರ್ಯಕಾರೀ ಸಮಿತಿಯ ಪದಾಧಿಕಾರಿಗಳಾದ ಡಾ.ಮೋಹಿತ್.ಪಿ.ತಹಿಲಿಯಾನಿ, ಡಾ.ವಿನಯ್ ಕುಮಾರ್, ಪ್ರೊ.ಮಂಜುಕಿರಣ್, ಡಾ.ಹರಿವಿನೋದ್.ಎನ್, ಡಾ.ಯು.ಸಿ.ನಿರಂಜನ್, ಪ್ರೊ.ಆಶ್ವಿನಿ ಹೊಳ್ಳ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜೀವಿತ್.ಎಸ್ ಪ್ರಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕರಾದ ಡಾ.ಜೀವಿತಾ.ಬಿ.ಕೆ ಸ್ವಾಗತಿಸಿ, ಪ್ರೊ.ರಜನಿ ರೈ.ಬಿ ವಂದಿಸಿದರು. ನಿತ್ಯಶ್ರೀ.ಪಿ.ಆರ್ ಕಾರ್ಯಕ್ರಮ ನಿರ್ವಹಿಸಿದರು.

i2 conecct1

i2 conecct2

Sponsors

Related Articles

Back to top button