ಕೆದಿಲ ಶಾಲೆಯ ನೂತನ ಕಟ್ಟಡದ ಉದ್ಘಾಟನೆ…
ಪುತ್ತೂರು: ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸುವುದರಿಂದ ಮಕ್ಕಳ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವ ಕೆಲಸ ಸರಕಾರದಿಂದ ಆಗಬೇಕಾಗಿದೆ. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಅನುದಾನವನ್ನು ಕಾಯದೆ ಊರವರ ಸಹಕಾರದಿಂದ ಉತ್ತಮ ಶಾಲೆಗಳನ್ನು ನಿರ್ಮಿಸಬಹುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೆದಿಲ ಮತ್ತು ಅಕಾಡೆಮಿ ಆಫ್ ರೂರಲ್ ಎಜುಕೇಶನ್ ಕೆದಿಲ ಇದರ ವತಿಯಿಂದ ನಿರ್ಮಾಣವಾದ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಶಾಸಕ, ಶಾಲೆಯ ಕಟ್ಟಡ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಊರವರ ಸಹಕಾರ ಅಗತ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಬಂಟ್ವಾಳ ಕ್ಷೇತ್ರ ಕ್ರೀಡಾ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಕೆದಿಲ ಗ್ರಾ.ಪಂ ಅಧ್ಯಕ್ಷ ಹರೀಶ ವಾಲ್ತಾಜೆ, ಕರ್ನಾಟಕ ಬ್ಯಾಂಕ್ ಪುತ್ತೂರು ಕ್ಲಸ್ಟರ್ ಮುಖ್ಯ ನಿರ್ವಾಹಕ ಶ್ರೀಹರಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಮೇಶ್, ಕೆದಿಲ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಪೆರ್ನಾಜೆ, ವಿಶ್ರಾಂತ ಅಧ್ಯಾಪಕ, ದಾನಿ, ಕೆ.ಸುಬ್ರಾಯ ಭಟ್ ಶುಭಹಾರೈಸಿ ಮಾತನಾಡಿ, ಶಾಲೆಯ ಅಭಿವೃದ್ಧಿಕಾರ್ಯಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಶಾಲೆಗೆ ನೀರಿನ ಸೌಕರ್ಯ ಒದಗಿಸಿದ ಕೇಶವ ಪ್ರಸಾದ್ ಕೆದಿಲ ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿ ಆಫ್ ರೂರಲ್ ಎಜುಕೇಶನ್ ಟ್ರಸ್ಟ್ ನ ಸಂಚಾಲಕರಾದ ಚಂದ್ರಶೇಖರ ಭಟ್ ಕುಕ್ಕಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಟ್ರಸ್ಟ್ ನ ಕೋಶಾಧಿಕಾರಿ ಕೃಷ್ಣಮೂರ್ತಿ ವಂದಿಸಿದರು. ಶಾಲೆಯ ನೂತನ ಕಟ್ಟಡಕ್ಕೆ ಕೆದಿಲ ಶಾಲೆಯ ಕಟ್ಟಡ ಸಮಿತಿಯ ಅಧ್ಯಕ್ಷ ಕೆ. ಸುಬ್ರಾಯ ಭಟ್ ಅಂಡಿಪುಣಿ ರೂ. ಹದಿನೈದು ಲಕ್ಷ ಸಹಾಯ ಧನ ನೀಡಿದರು. ಪುಂಜತ್ತೋಡಿ ಭೀಮ ಭಟ್ಟರ ಹೆಸರಿನಲ್ಲಿ ಕೊಠಡಿ ನಿರ್ಮಾಣ ಮಾಡಿ ಕೊಡಲಾಗುವುದಾಗಿ ಕೃಷ್ಣ ಮೂರ್ತಿ ಕೆದಿಲ ಘೋಷಿಸಿದರು.
ಶಾಸಕರ ಅನುದಾನದಿಂದ ಶೌಚಾಲಯ ನಿರ್ಮಾಣಕ್ಕೆ ರೂ. ಐದು ಲಕ್ಷ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ದೀಪದಿಂದ ಓರ್ವ ಶಿಕ್ಷಕರ ನೇಮಕ ಮಾಡುವುದಾಗಿ ಘೋಷಿಸಿಸಲಾಯಿತು. ಕಟ್ಟಡ ಸಮಿತಿಯ ಉಪಾಧ್ಯಕ್ಷ ಮುರಳೀಧರ ಶೆಟ್ಟಿ, ಸುಬ್ಬಣ್ಣ ಭಟ್ ಬೀಡಿಗೆ ಉಪಸ್ಥಿತರಿದ್ದರು. ಕೇಶವ ಕೆದಿಲ ನಿರೂಪಿಸಿದರು.