ಯಕ್ಷಗಾನ ಮತ್ತು ಸಾಮಾಜಿಕ ಧುರೀಣ ಪಣಿಯೂರು ಕರುಣಾಕರ ಶೆಟ್ಟರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ…

ಮಂಗಳೂರು: ತೆಂಕು – ಬಡಗು ಯಕ್ಷಗಾನದ ಹವ್ಯಾಸಿ ವೇಷಧಾರಿ, ಹೋಟೆಲ್ ಉದ್ಯಮಿ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತ ಪಣಿಯೂರುಗುತ್ತು ಕರುಣಾಕರ ಶೆಟ್ಟಿ ಅವರು 2024 – 25 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ನೌಕೆ ಆರ್ಯಭಟ ಉಪಗ್ರಹ ಉಡ್ಡಯನವಾದ ವರ್ಷವೇ ಸ್ಥಾಪನೆಗೊಂಡ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 50 ವರ್ಷಗಳನ್ನು ಪೂರೈಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ದೇಶ ವಿದೇಶದ ಅನನ್ಯ ಸಾಧಕರನ್ನು ಗುರುತಿಸಿ ಈ ವಿಶೇಷ ಪ್ರಶಸ್ತಿಯನ್ನು ನೀಡುತ್ತಿದೆ.
ಕಲಾ ರಂಗದ ಕರುಣಾಕರ:
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪಣಿಯೂರು ಕುಟುಂಬದವರಾದ ಕರುಣಾಕರ ಶೆಟ್ಟರಿಗೆ ಪ್ರಸ್ತುತ 66ರ ಹರೆಯ. ಯಕ್ಷಗಾನ ಕಲೆಯಲ್ಲಿ ಅಪಾರ ಅಭಿಮಾನ ಹೊಂದಿದ ಅವರು ಬಡಗುತಿಟ್ಟಿನ ಹವ್ಯಾಸಿ ವೇಷಧಾರಿಯಾಗಿ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರವಹಿಸಿದ್ದಾರೆ. ತೆಂಕು – ಬಡಗುತಿಟ್ಟಿನ ಪ್ರಮುಖರೊಂದಿಗೆ ತಾಳಮದ್ದಳೆ ಅರ್ಥ ಧಾರಿಯಾಗಿಯೂ ಭಾಗವಹಿಸಿದ್ದಾರೆ. ಅಲ್ಲದೆ ಹಲವು ವರ್ಷ ಐತಿಹಾಸಿಕ ಮೂಲ್ಕಿ ಮೇಳವನ್ನು ನಡೆಸಿದ ಅನುಭವ ಅವರಿಗಿದೆ.
ಸುಮಾರು ನಾಲ್ಕು ದಶಕಗಳ ರಂಗಾನುಭವ ಹೊಂದಿದ ಪಣಿಯೂರು ಅವರು ಭರತನಾಟ್ಯವನ್ನೂ ಅಭ್ಯಸಿಸಿದ್ದಾರೆ. ತುಳು – ಕನ್ನಡ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಉಡುಪಿಯ ‘ರಂಗಸ್ಥಳ’ ಮತ್ತು ಮಂಗಳೂರಿನ ‘ಯಕ್ಷಾಂಗಣ’ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ದುಡಿಯುತ್ತಿದ್ದಾರೆ. ತುಳುನಾಡಿನ ವಿಶಿಷ್ಟ ಆಚರಣೆಯಾದ ದೈವರಾಧನೆಯಲ್ಲಿ ಮಧ್ಯಸ್ಥರಾಗಿ – ನುಡಿಕಾರರಾಗಿಯೂ ಅವರು ಪರಿಣತರು.
ಉದ್ಯಮ ಮತ್ತು ಸಾಮಾಜಿಕ ರಂಗ:
ಮೂಲತಃ ಹೋಟೆಲ್ ಉದ್ಯಮಿಯಾಗಿರುವ ಕರುಣಾಕರ ಶೆಟ್ಟರು ಮುಂಬೈ ಮತ್ತು ಮಂಗಳೂರು ಗಳಲ್ಲಿ ಹೋಟೆಲ್ ವ್ಯವಹಾರ ನಡೆಸಿರುವುದಲ್ಲದೆ, ಪ್ರಸ್ತುತ ಕ್ಯಾಟರಿಂಗ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಪಣಿಯೂರು ಗ್ರಾಮ ಪಂಚಾಯತಿ ಸದಸ್ಯರಾಗಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ವಯೋವೃದ್ಧರಿಗೆ ಹಲವು ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಅಲ್ಲದೆ ಉಚಿತ ವಯಸ್ಕರ ಶಿಕ್ಷಣ ಶಾಲೆಯನ್ನು ತೆರೆದಿದ್ದಾರೆ.
ಕರುಣಾಕರ ಶೆಟ್ಟರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾಡಳಿತವು 2019 – 20 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಅವರಿಗೆ ನೀಡಿದೆ. ಅಲ್ಲದೆ ತನ್ನ ಸಮಾಜಮುಖಿ ಕೆಲಸಗಳಿಗಾಗಿ ವಿವಿಧ ಸಂಘ ಸಂಸ್ಥೆಗಳಿಂದ ಅವರು ಗೌರವಿಸಲ್ಪಟ್ಟಿದ್ದಾರೆ.
ಇದೇ 2025 ಮೇ 22 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಏರ್ಪಡಿಸಿರುವ ಸುವರ್ಣ ಸಂಭ್ರಮದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷಗಾನ ಮತ್ತು ಸಮಾಜ ಸೇವೆಗಾಗಿ ಅವರು ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.