ಡಾ.ಗೀತಾರವರ ಷಟ್ಪದಿ ಮಂಜರಿಯ ಅನಾವರಣ…

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ರವರು ನರಿಕೊಂಬು ಗ್ರಾಮದ “ಪ್ರಸಾದ ನಿಲಯ”ದ ಸೀತಮ್ಮ ನಾರಾಯಣ ರಾವ್ ವೇದಿಕೆಯಲ್ಲಿ ಡಾ.ಗೀತಾ ಎನ್. ಅವರ ಕವನಸಂಕಲನ “ಷಟ್ಪದಿಮಂಜರಿ “ಕೃತಿಯನ್ನು ಅನಾವರಣಗೊಳಿಸುತ್ತಾ. ಕಾವ್ಯದ ಲಕ್ಷಣಗಳನ್ನು ಮೈಗೂಡಿಸಿಗೊಂಡ‌ ಈ ಷಟ್ಪದಿ ವಿಶ್ವ ವಿದ್ಯಾನಿಲಯಗಳಲ್ಲಿ ಪಠ್ಯವಾಗುವಷ್ಟು ಮೌಲ್ಯ ಉಳ್ಳದ್ದಾಗಿದೆ ಎಂದು ಶ್ಲಾಘಿಸಿದರು.
ಕೃತಿಯ ಕುರಿತಾಗಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಿಕೆ ಡಾ.ನಾಗವೇಣಿ ಮಂಚಿಯವರು ಇಲ್ಲಿನ ಷಟ್ಪದಿಗಳಲ್ಲಿ ಕಾಣುವ ವೈವಿಧ್ಯತೆ, ಕವಯಿತ್ರಿಯ ದೇಸೀಯ ಒಲವು, ಕವನ,ಕಾವ್ಯ ರಚನೆಯಲ್ಲಿನ ಸಾರ-ಸತ್ತ್ವಗಳು, ಸಂಸ್ಕೃತದಿಂದ ಕನ್ನಡೀಕರಣಗೊಂಡ ಪದ ಪ್ರಯೋಗ ಹಾಗೂ ಅನೇಕ ಹೊಸಪದಗಳ ಉಪಯೋಗ, ಇಸು ಪ್ರತ್ಯಯ ಬಳಕೆ ಇತ್ಯಾದಿಗಳನ್ನು ಸೋದಾಹರಣವಾಗಿ ವಿವರಿಸುತ್ತಾ ಉಪಮೆ,ರೂಪಕಗಳನ್ನು ಷಟ್ಪದಿಗಳಲ್ಲಿ ಬಳಸುವಾಗ ಅಗತ್ಯವಾಗಿ ಬೇಕಾಗುವ ಮಾತ್ರೆಗಳ ಕಾಳಜಿ ,ವಿದ್ವತ್, ಪ್ರಾಸಗಳ ಆಯ್ಕೆ ಹಾಗೂ ಏಕಾಗ್ರತೆ ಕಲೆ ಗೀತಾರಿಗೆ ಸಿದ್ಧಿಸಿದೆ ಎಂದರು.
ಷಟ್ಪದಿ ಮಂಜರಿಯ ಲೇಖಕಿ ಡಾ. ಗೀತಾ ಎನ್ ಮಾತನಾಡುತ್ತ ವಿವಿಧ ವಾಟ್ಸಪ್ ಗುಂಪುಗಳ ಪ್ರೇರಣೆ, ಶ್ರೀಯುತ ವಿರೇಂದ್ರ ಶೆಣೈ ಹಾಗೂ ಗೆಳೆಯರ ಬೆಂಬಲ, ಮೂಡುಬಿದಿರೆ ಎಸ್.ಎನ್. ಪಾಲಿಟೆಕ್ನಿಕ್ ಕಾಲೇಜಿನ ಶ್ರೀ ವಿಶ್ವನಾಥರ ಮಾರ್ಗದರ್ಶನ, ಮನೆಮಂದಿಯ ಪ್ರೋತ್ಸಾಹ ಜೊತೆಗೆ ಆಯುಷ್ಯ ಭಾಗ್ಯ ದೊರೆತು ತಾಯಿ ಭುವನೇಶ್ವರಿಯ ಖಂಡ ಕಾವ್ಯದ ಸೇವಾಭಾಗ್ಯ ತನಗೆ ದೊರೆಯಲೆಂದು ಆಶಿಸಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ವಿಶ್ವನಾಥರು ಅತಿಥಿಗಳಾಗಿ ಭಾಗವಹಿಸಿದ್ದರು.ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಅಧ್ಯಕ್ಷರಾದ ಕೋರ್ಯ ರಮೇಶ್ ಹೊಳ್ಳರು ಸಭೆಯ ಅಧ್ಯಕ್ಷತೆ ವಹಿಸಿದ್ದು ಸರಳ ಸಜ್ಜನಿಕೆಯವರಾಗಿ, ಎಲೆಯ ಮರೆಯ ಕಾಯಿಯಂತೆ ಇರುವ ಡಾ.ಗೀತಾರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಪುತ್ತೂರಿನ ಶ್ರೀಮತಿ ಪಾರ್ವತಿ ಶಾಸ್ತ್ರಿಯವರು ಕುಸುಮ ಷಟ್ಪದಿಯಲ್ಲಿ ಗೀತಾರ ಬಗ್ಗೆ ಕವನವನ್ನು ವಾಚಿಸಿದರೆ, ಯಕ್ಷಗುರು ಶ್ರೀ ಮುಡಿಪು ಜಯಂತ ಕಾರಂತರು ಸದ್ರಿ ಕೃತಿಯೊಳಗಿನ ಷಟ್ಪದಿಗಳನ್ನು ಭಾಗವತಿಕೆಯ ರೂಪದಲ್ಲಿ ಪ್ರಸ್ತುತ ಪಡಿಸಿದರು.

ಪ್ರೊಫೆಸರ್ ಮಾಧವರಾವ್ ಸಂಘಟಿಸಿ, ನಿರೂಪಿಸಿದ್ದ ಸಮಾರಂಭದಲ್ಲಿ ಶ್ರೀಮತಿ ಕ್ಷಮಾ ಎನ್ ಸ್ವಾಗತಿಸಿದರೆ , ಕುಮಾರಿಯರಾದ ಮಾನಸ, ಚಿನ್ಮಯಿ, ತನ್ಮಯಿ ಯವರುಗಳ ಸಹಯೋಗದಲ್ಲಿ ಪ್ರಾರ್ಥನಾ ನೃತ್ಯ ನಡೆದು, ಕೊನೆಯಲ್ಲಿ ಶ್ರೀ ವಿಶ್ವಾಸ ರಾವ್ ವಂದಿಸಿದರು.

ಈ ಸಂದರ್ಭದಲ್ಲಿ ನಾರಿಕುಂಭೇಶ್ವರ ಯಕ್ಷಗಾನ ಸಂಘ, ನರಿಕೊಂಬು ಇವರಿಂದ ಆಯೋಜಿಸಲ್ಪಟ್ಟ ತಾಳಮದ್ದಳೆ “ನಚಿಕೇತ” ತುಂಬ ಅರ್ಥಪೂರ್ಣವಾಗಿ ಮೂಡಿಬಂದು ಜನಮನ ಗೆದ್ದಿತು.

Related Articles

Back to top button