ವಿನೂತನ ಮೊಬೈಲ್ ವರ್ಜನ ಅಭ್ಯಾಸ ಶಿಬಿರ ಸಂಪನ್ನ…

ಉಡುಪಿ: ಉಡುಪಿ ಶ್ರೀ ಪುತ್ತಿಗೆ ಮಠದ ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಡಾ. ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಸಂಕಲ್ಪ ಮತ್ತು ಮಾರ್ಗದರ್ಶನದೊಂದಿಗೆ ಮೇ 14 ರಿಂದ ಮೇ 18 ರವರೆಗೆ 5 ದಿನಗಳ ಕಾಲ ನಡೆದ ಮೊಬೈಲ್ ವರ್ಜನ ಶಿಬಿರ ಯಶಸ್ವಿ ಪ್ರಯೋಗವಾಗಿ ಸಂಪನ್ನಗೊಂಡಿತು .
ಹಿರಿಯಡ್ಕದಲ್ಲಿರುವ ಶ್ರೀ ಪುತ್ತಿಗೆ ಮೂಲಮಠದ ಮೊಬೈಲ್ ಸಂಪರ್ಕ ಮುಕ್ತ ಪ್ರಕೃತಿ ರಮ್ಯ ನದೀ ತಟಾಕದ ಮಠೀಯ ಪರಿಸರ ಮತ್ತು ಶ್ರೀ ಗುರುಸಾನ್ನಿಧ್ಯ ಯಶಸ್ಸಿನ ಬಹುದೊಡ್ಡ ಪಾಲು ಪಡೆಯಿತು.
ಹಿರಿಯ ಶ್ರೀಪಾದರು ಶಿಬಿರಾರ್ಥಿಗಳು ಸಮರ್ಪಿಸಿದ ಮೊಬೈಲ್ ಗಳನ್ನು ಸ್ವೀಕರಿಸುವ ಮೂಲಕ ಉದ್ಘಾಟಿಸಿದರೆ, ಕಿರಿಯ ಶ್ರೀಗಳು ಅದೇ ಮೊಬೈಲ್ ಗಳ ಜೊತೆಗೆ ಶಿಬಿರಾರ್ಥಿಗಳೇ ಅಂಕುರಾರೋಪಣ ಮಾಡಿದ ಮೊಳಕೆ ಸಹಿತ ಮಡಿಕೆಗಳನ್ನು ಅವರಿಗೇ ವಿತರಿಸುವ ಮೂಲಕ ಅರ್ಥಪೂರ್ಣ ಸಮಾಪನಗೈದರು.
8 ರಿಂದ 12 ವಯೋಮಾನದ 17 ಶಿಬಿರಾರ್ಥಿಗಳು ಮತ್ತು ಮೂವರು ಪಾಲಕ ಸ್ವಯಂ ಸೇವಕರು ಮೊಬೈಲ್ ಗೆ ಪರ್ಯಾಯವಾಗಿ ನಡೆಸಬಹುದಾದ ದೈನಂದಿನ ಚಟುವಟಿಕೆಗಳು ಮತ್ತು ಮೊಬೈಲ್ ಸದ್ಬಳಕೆಯ ಉಪಯುಕ್ತ ಮಾಹಿತಿ ಪಡೆದರು. ಮಕ್ಕಳು ಹೆತ್ತವರಿಗೆ ಕೈತುತ್ತು ತಿನ್ನಿಸುವ ಮಾತೃಭೋಜನದಲ್ಲಿ ಭಾವುಕರಾದರು.
“ಮುಂದಿನ ವರ್ಷದಿಂದ ಹೆತ್ತವರಿಗೂ ಮೊಬೈಲ್ ವರ್ಜನ ಶಿಬಿರಗಳನ್ನು ಬೇರೆ ಬೇರೆ ಕೇಂದ್ರಗಳಲ್ಲಿ ನಡೆಸಲಾಗುವುದು. ಇತರರೂ ಈ ಮೇಲ್ಪಂಕ್ತಿಯನ್ನು ಅನುಸರಿಸಿದರೆ ಸಮಾಜಕ್ಕೆ ಒಳತಾಗಲಿದೆ. ಶ್ರೀಕೃಷ್ಣನ ಆತ್ಮ ಸಂಯಮಯೋಗವೇ ಈ ಶಿಬಿರಕ್ಕೆ ಮೂಲಾಧಾರ.”
-ಡಾ. ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು.
“ಶಿಬಿರಾರ್ಥಿಗಳೆಲ್ಲರೂ ಕಲಿತ ಕೌಶಲ್ಯಗಳನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ಮೊಬೈಲ್ ಬಳಕೆಯಲ್ಲಿ ನಿಯಂತ್ರಣ ಸಾಧಿಸುವಂತಾಗಲಿ. ಮೂಲಮಠದ ಶ್ರೀನರಸಿಂಹ ದೇವರು, ಕಂಬದ ಗಣಪತಿಯ ಕೃಪೆಯಿರಲಿ.”
-ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು .
“ಈ ಪ್ರಥಮ ಪ್ರಯತ್ನ ಅಭಿನಂದನೀಯ. ಯಾವುದೇ ಶಿಬಿರಾರ್ಥಿಯು ಯಾವುದೇ ಅಡಿಕ್ಷನ್ ಹಂತ ತಲುಪಿಲ್ಲ . ಸಕಾಲದಲ್ಲಿ ಈ ಚಿಂತನೆ ಕಾರ್ಯರೂಪ ಪಡೆದಿದೆ.”
– ಶಿಬಿರಕ್ಕೆ ಸಹಯೋಗ ನೀಡಿದ ಮಣಿಪಾಲದ ಕೆ ಎಂ ಸಿಯ ಮನೋಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಮತ್ತು ಸಂಪನ್ಮೂಲ ವ್ಯಕ್ತಿ ಡಾ| ಸುಮಾ ಉಡುಪ
“ಶಿಬಿರಾರ್ಥಿಗಳ ಪಾಲಕರಿಗೂ ಒಂದು ದಿನ ಕಡ್ಡಾಯ ಪಾಲ್ಗೊಳ್ಳುವಿಕೆಯನ್ನು ವಿಧಿಸಿ ವಿಶೇಷ ಸಂವಾದ ನಡೆಸಿದ್ದು ಪರಿಣಾಮಕಾರಿಯಾಗಿತ್ತು. ನಾವೂ ಮನೆಗಳಲ್ಲಿ ಮಕ್ಕಳು ಮತ್ತು ಮೊಬೈಲ್ ಜೊತೆಗೆ ವರ್ತಿಸಬೇಕಾದ ರೀತಿಯ ಕಣ್ಣು ತೆರೆಸಿತು . ಊಟ –ವಸತಿ ತರಬೇತಿ ಎಲ್ಲವೂ ಚೆನ್ನಾಗಿತ್ತು.”
– ಪ್ರಸಾದ್ ಹಿರಿಯಡ್ಕ, ಪಾಲಕರ ಪ್ರತಿನಿಧಿ, ಹಿಂದೂ ಜಾಗರಣಾ ವೇದಿಕೆ ಪ್ರಮುಖರು .
“ಅತ್ಯುತ್ತಮವಾಗಿ ಸಂಯೋಜನೆಗೊಂಡ ಶಿಬಿರ. ದಿನಚರಿ, ವೇಳಾಪಟ್ಟಿ , ಒಟ್ಟು ಪ್ರಸ್ತುತಿ ಎಲ್ಲವೂ ಪರಿಣಾಮಕಾರಿ. ಬಹಳ ಯೋಚಿಸಿ ಆಯೋಜಿಸಿದ ಶಿಬಿರ”.
-ಡಾ| ಸುಧೀರ್ ರಾವ್, ನಿಟ್ಟೆ ಯುನಿವರ್ಸಿಟಿ , ಸಂಪನ್ಮೂಲ ವ್ಯಕ್ತಿ .
“ಬೆಂಗಳೂರಿನಲ್ಲಿಯೂ ಇಂತಹ ಶಿಬಿರ ನಡೆದದ್ದಿಲ್ಲ. ಬಹುಶಃ ಇದೇ ಮೊದಲಿರಬೇಕು. ನನ್ನ ತಾಯಿ ಮತ್ತು ಮಗಳೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದೆ. ಶಿಸ್ತುಬದ್ದ ಶಿಬಿರ. ಆಭಿನಯ ಗೀತೆ, ಕುಣಿತ ಭಜನೆ , ಡ್ರಾಯಿಂಗ್ ಗಳನ್ನು ಶ್ರದ್ದೆಯಿಂದ ಕಲಿತಿದ್ದಾರೆ.”
– ಕಾವ್ಯ ಸರಸ್ವತಿ ಹೆಬ್ಬಾರ್, ಅಧ್ಯಾಪಕಿ, ಸುಬ್ರಮಣ್ಯಂ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ಬೆಂಗಳೂರು
“ಶಿವಮೊಗ್ಗ, ಶಿರಸಿ, ಕಾಸರಗೋಡು, ಉಜಿರೆ, ಉಡುಪಿ, ಹೀಗೆ ಬೇರೆ ಬೇರೆ ಕಡೆಗಳಿಂದ ಬಂದಿದ್ದರು. ಎಲ್ಲಾ ಫ್ರೆಂಡ್ಸ್ ಆಗಿದ್ದಾರೆ. ಊಟ ತಿಂಡಿ ವೆರೈಟೀ ವೆರೈಟೀ ಇತ್ತು . ಸ್ವಿಮ್ಮಿಂಗ್ ಸೂಪರ್, ಒಳಗೆ ಹೊರಗೆ ಫುಲ್ ಆಟ. ಗಮ್ಮತ್ತಾಗಿದೆ. ಮೊಬೈಲ್ ನೆನಪಿಗೇ ಬರಲಿಲ್ಲ.
-ಬೆನಕ ಉಜಿರೆ , ಶಿಬಿರಾರ್ಥಿ
ಈ ವಿನೂತನ ಚಿಂತನೆಯ ಚೊಚ್ಚಲ ಪ್ರಯತ್ನ ಯಶಸ್ವಿಯಾಗಿದೆ. ಸಂಯೋಜಕರು, ಸಂಚಾಲಕರಾದಿಯಾಗಿ, ಸಂಪನ್ಮೂಲ ವ್ಯಕ್ತಿಗಳಿಗೂ ಧನ್ಯವಾದಗಳು. ಪೂಜ್ಯ ಶ್ರೀಪಾದರ ಮಾರ್ಗದರ್ಶನದಲ್ಲಿ ಇಂತಹ ಸಾಹಸಗಳಿಗೆ ಆಡಳಿತ ಮಂಡಳಿ ಸದಾ ಸಿದ್ದವಿದೆ.
-ಶ್ರೀ ನಾಗರಾಜ ಆಚಾರ್ಯ, ದಿವಾನರು, ಶ್ರೀ ಪುತ್ತಿಗೆ ಮಠ












