ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರಧಾನ ಸಮಾರಂಭ…

ಪುತ್ತೂರು: ಇಂದಿನ ಯುವ ಪೀಳಿಗೆ ಎದುರಿಸಬೇಕಾಗಿರುವುದು ಪ್ರಾದೇಶಿಕ ಸವಾಲುಗಳನ್ನಲ್ಲ ಬದಲಾಗಿ ಜಾಗತಿಕ ಸವಾಲುಗಳನ್ನು ಎಂದು ಉಡುಪಿಯ ಅದಾನಿ ಯುಪಿಸಿಎಲ್ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕೇಶವ ಸಂಕಲ್ಪ ಸಬಾಭವನದಲ್ಲಿ 2018-19 ನೇ ಸಾಲಿನಲ್ಲಿ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ವೃತ್ತಿರಂಗದ ಆರಂಭದಲ್ಲಿಯೇ ಇಂದಿನ ಯುವ ಜನತೆ ಅನೇಕ ಒತ್ತಡಗಳನ್ನು ಎದುರಿಸುತ್ತಿವೆ. ಇವನ್ನು ಸಮರ್ಥವಾಗಿ ಎದುರಿಸುವ ಛಾತಿ ಉಳ್ಳವರು ಉನ್ನತ ಸ್ಥಾನಕ್ಕೇರುತ್ತಾರೆ ಎಂದರು. ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಕಷ್ಟ-ಸುಖಗಳು, ಲಾಭ-ನಷ್ಟಗಳು ಎಷ್ಟು ತೀವ್ರತರವಾಗಿದ್ದರೂ ಭಾವೋದ್ರೇಕಕ್ಕೊಳಗಾಗದೆ ಸದಾ ಸಮಾಧಾನದಿಂದ ಅದನ್ನು ನಿರ್ವಹಿಸಬೇಕು . ನಮಗೆ ಸಹಜ ಸಾಮರ್ಥ್ಯವಿರುವ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಶ್ರಮವಹಿಸಿ ದುಡಿದರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ನಮ್ಮ ಜೀವನದ ಮೌಲ್ಯ ನಿರ್ಧರಿತವಾಗುವುದು ನಾವು ಇತರರ ಬದುಕಿಗೆ ಮತ್ತು ಸಮಾಜದ ಏಳಿಗೆಗೆ ಎಷ್ಟು ನೆರವಾಗಿದ್ದೇವೆ ಎನ್ನುವ ಅಂಶದಿಂದ. ಈ ಅಂಶವು ನಮ್ಮ ಸ್ವಭಾವದಲ್ಲಿ ಇಲ್ಲದೇ ಹೋದರೆ ನಮ್ಮ ವೈಯಕ್ತಿಕ ಸಾಧನೆಗೆ ಅಥವಾ ಬೆಳವಣಿಗೆಗೆ ಹೆಚ್ಚಿನ ಅರ್ಥವಿಲ್ಲ ಎಂದರು. ಸಮಾಜದಿಂದ ಉಪಕೃತರಾದ ನಾವು ಸಮಾಜಕ್ಕೆ ನಮ್ಮಿಂದಾದ ಸೇವೆ ಸಲ್ಲಿಸದೇ ಹೋದರೆ ನಮ್ಮ ವ್ಯಕ್ತಿತ್ವಕ್ಕೆ ಘನೆತೆಯಿಲ್ಲ . ತಾವು ಕಲಿತ ಸಂಸ್ಥೆಯ ಬಗ್ಗೆ ಉತ್ತಮ ವಿಷಯಗಳನ್ನು ಪಸರಿಸಿ ಸಂಸ್ಥೆಯ ಉನ್ನತಿಗೆ ಸಹಕಾರವನ್ನು ನೀಡಬೇಕೆಂದು ಕರೆನೀಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಪ್ರಥಮ ರ‍್ಯಾಂಕ್ ಗಳಿಸಿದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ಸಿಂಧೂರ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. ಪ್ರತಿ ವಿಭಾಗದಲ್ಲೂ ಉತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನಿತ್ತು ಗೌರವಿಸಲಾಯಿತು.
2018-19ನೇ ಸಾಲಿನಲ್ಲಿ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿಪ್ರಧಾನ ಮಾಡಲಾಯಿತು
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ರಾಧಾಕೃಷ್ಣ ಭಕ್ತ, ಕೋಶಾಧಿಕಾರಿ ಮುರಳೀಧರ ಭಟ್, ನಿರ್ದೇಶಕರಾದ ಸುಬ್ರಮಣ್ಯ ಭಟ್.ಟಿ.ಎಸ್, ಅಚ್ಯುತ ಪ್ರಭು, ಶ್ರೀಮತಿ ಮಲ್ಲಿಕಾ ಪ್ರಸಾದ್, ಪೇರೆಂಟ್ ರಿಲೇಶನ್ ಸೆಲ್‍ನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಕ್ಯಾಂಪಸ್ ನಿರ್ದೇಶಕರು ಹಾಗೂ ವಿವಿದ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರೊ. ಸಂದೇಶ್ ಕಾರಂತ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ. ಭಾಸ್ಕರ್ ಕುಲಕರ್ಣಿ ವಂದಿಸಿದರು. ಪ್ರೊ.ಮಾಧವಿ ಪೈ ಮತ್ತು ಪ್ರೊ. ಶ್ವೇತಾಂಬಿಕಾ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button